- ಆಧುನಿಕ ತಂತ್ರಜ್ಞಾನ ವ್ಯವಸ್ಥೆ
- ಹೊಸ ಟೆಂಡರ್ ನೀಡಲು ಸಿದ್ಧತೆ
ಬೆಂಗಳೂರು: ಅರೋಗ್ಯ ಪ್ರತಿ ಜನರ ಮೊದಲ ಆಧ್ಯತೆ. ಆದರೆ ಇಂದು ಕೆಲವು ಸೇವೆಗಳು ಜನತೆಗೆ ಸಿಗುತ್ತಿಲ್ಲ ಎಂಬ ಆರೋಪ ಇದೆ. ಈ ನಡುವೆ ರಾಜ್ಯಾದ್ಯಂತ ಗುಣಮಟ್ಟದ ಆಂಬ್ಯುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ತುರ್ತು ಆರೋಗ್ಯ ಸೇವೆ ನೀಡುವ ಆಂಬ್ಯುಲೆನ್ಸ್ ಗಳ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ನಿವಾರಿಸಿ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ.
108 ಆಂಬ್ಯುಲೆನ್ಸ್ ಸೇವೆಗೆ ರಾಜ್ಯ ಸರ್ಕಾರ ದೊಡ್ಡ ಮೊತ್ತದ ಹಣ ನೀಡುತ್ತದೆ. ಆದರೆ ಅದಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮಾದರಿ ಆಗುವಂತಹ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಅದಕ್ಕಾಗಿ ಹೊಸದಾಗಿ ಟೆಂಡರ್ ನೀಡುವಾಗ ಲೋಪಗಳಿಗೆ ಅವಕಾಶವಿಲ್ಲದಂತೆ ಜಾಗತಿಕ ಮಟ್ಟದ ಸೇವೆ ನೀಡುವ ಸಂಸ್ಥೆ ಅಥವಾ ಕಂಪನಿಗಳ ಒಕ್ಕೂಟಕ್ಕೆ ಗುತ್ತಿಗೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಕರೆ ಅಥವಾ ಸಂದೇಶ ನೀಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ರೋಗಿಯನ್ನು ಕರೆದೊಯ್ಯುವಂತಿರಬೇಕು. ಆಂಬ್ಯುಲೆನ್ಸ್ ನಿಗದಿ ಆಗುವ ಮೊದಲು ಕಾಲ್ ಸೆಂಟರ್ ನಲ್ಲಿ ಕರೆ ಸ್ವೀಕರಿಸಿ ಸಮೀಪದಲ್ಲಿ ಇರುವುದನ್ನು ಕಳುಹಿಸಬೇಕು. ಪ್ರಾಥಮಿಕ ಚಿಕಿತ್ಸೆ ನೀಡುವ ತರಬೇತಾದ ಸಿಬ್ಬಂದಿ ಇರಲೇಬೇಕು. ಉಬರ್ ಮತ್ತು ಓಲಾ ಮಾದರಿಯ ಆ್ಯಪ್ ವ್ಯವಸ್ಥೆ ಇರಬೇಕು. ಜಿಪಿಎಸ್, ಬಯೋಮೆಟ್ರಿಕ್, ಕಾಲ್ ಸೆಂಟರ್ ವ್ಯವಸ್ಥೆ ಸದೃಢವಾಗಿರಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ವಾಹನ ಬದಲಾವಣೆ!: ಆಂಬುಲೆನ್ಸ್ ವಾಹನಗಳ ಸಾಮರ್ಥ್ಯ ಕೂಡ ಕಡಿಮೆ ಇದೆ.ಓಮ್ನಿ, ಕಡಿಮೆ ಸಿಸಿ ವಾಹನಗಳು ಕೂಡ ನಿಗದಿತ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಇದೆ.