- ತರಕಾರಿ, ಹಣ್ಣು, ಅಗತ್ಯ ವಸ್ತು ಬೆಲೆ ಏರಿಕೆ
- ಕರೋನಾ ನಡುವೆ ಮತ್ತೆ ಜನತೆಗೆ ಶಾಕ್
ಬೆಂಗಳೂರು: ದೀಪಾವಳಿ ಹಬ್ಬ ಈ ಬಾರಿ ಸಾರ್ವಜನಿಕರಿಗೆ ದುಬಾರಿಯಾಗುವ ಸಾಧ್ಯತೆಗಳಿವೆ. ಕರೋನಾ ನಡುವೆ ಬೆಲೆ ಏರಿಕೆಯ ಬಿಸಿ ಜನ ಸಾಮಾನ್ಯರಿಗೆ ಜೋರಾಗಿಯೇ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು ಜನರನ್ನು ಕಂಗಾಲಾಗಿಸಿದೆ.
ತರಕಾರಿ, ಬೇಳೆ ಕಾಳುಗಳ ಬೆಲೆ ದುಬಾರಿಯಾಗಿದ್ದು, ದೀಪಾವಳಿ ಹೊಸ್ತಿಲಲ್ಲಿ ಎದುರಾದ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಪ್ರವಾಹದಿಂದ ಬೆಳೆ ನೀರು ಪಾಲಾಗಿದೆ. ಇತ್ತ ಕರೋನಾ ಕೂಡ ಜನರ ಹಣಕಾಸಿನ ವ್ಯವಹಾರವನ್ನು ಶೂನ್ಯಕ್ಕಿಳಿಸಿದೆ. ಆದ್ದರಿಂದ ಒಂದು ಕಡೆ ಹಣ ಇಲ್ಲ, ಇನ್ನೊಂದು ಕಡೆ ಬೆಳೆ ಇಲ್ಲ. ಹೀಗಾಗಿ ಈ ಬಾರಿಯ ದೀಪಾವಳಿ ಕೈ ಸುಡಲಿದೆ ಎಂದು ಹೇಳಲಾಗಿದೆ.
ಪ್ರವಾಹದಿಂದ ತರಕಾರಿ ಸೇರಿದಂತೆ ಇನ್ನಿತರ ಬೆಳೆ ನೀರು ಪಾಲಾಗಿದೆ. ಪರಿಣಾಮ ತರಕಾರಿ, ಆಹಾರ ಧಾನ್ಯಗಳ ಕೊರತೆ ಸೃಷ್ಟಿಯಾಗಿ, ಬೆಲೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಕೆಜಿಗೆ 80ರಿಂದ 100 ರೂಪಾಯಿ, ಆಲೂಗಡ್ಡೆ 50 ರಿಂದ 70 ರೂಪಾಯಿ, ಬೆಂಡೆಕಾಯಿ, ಚವಳಿಕಾಯಿ, ಹಾಗಲಕಾಯಿ, ಬದನೆಕಾಯಿ 80ರಿಂದ 100 ರೂಪಾಯಿ ಕೆಲವೆಡೆ ಇದೆ. ಇನ್ನು ಹೂವು ಕೂಡ ದುಬಾರಿಯಾಗಿದೆ. ಬೇಳೆ, ದವಸ ಧಾನ್ಯಗಳ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.