- ಆಂಧ್ರ ಬಳಿಕ ತಮಿಳುನಾಡು ಸರ್ಕಾರ ನಿಷೇಧ
- ದೇಶದ ತಾರೆಗಳೇ ಈ ಜೂಜಿನ ರಾಯಭಾರಿಗಳು!
ಚೆನ್ನೈ: ಕರೋನಾ ಇಡೀ ದೇಶದ ಅರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಪ್ರತಿ ಊರಲ್ಲೂ ಯುವ ಜನತೆ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಆನ್ಲೈನ್ ಗೇಮ್ಗಳು ಯುವ ಜನತೆಯ ಬದುಕು ಹಾಳು ಮಾಡುತ್ತಿದೆ. ಹೀಗಾಗಿ ಅನೇಕ ರಾಜ್ಯಗಳು ಆನ್ಲೈನ್ ಗೇಮ್ ನಿಷೇಧ ಮಾಡಿವೆ. ಈಗ ತಮಿಳುನಾಡು ಸರ್ಕಾರ ಈಗ ಎಲ್ಲಾ ರೀತಿಯ ಆನ್ಲೈನ್ ಗೇಮ್ಗಳನ್ನು ನಿಷೇಧ ಮಾಡಲು ನಿರ್ಧರಿಸಿದೆ.
ದುಡ್ಡು ನೀಡಿ ಆನ್ಲೈನ್ ಗೇಮ್, ಫ್ಯಾಂಟಸಿ ಲೀಗ್, ಆಪ್ ಆಧಾರಿತ ಗೇಮಿಂಗ್ ನಿಷೇಧಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ. ಆನ್ಲೈನ್ ಜೂಜು ಪ್ರಚಾರ ಮಾಡುತ್ತಿರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿವೆ ಸಾವು ನೋವು ಸಂಭವಿಸಿದೆ ಎಂದು ನಟ ಸುದೀಪ್ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ. ಹೀಗಾಗಿ ದುಡ್ಡು ಕೊಟ್ಟು ಆಡುವಂಥ ಎಲ್ಲಾ ಬಗೆಯ ಆನ್ ಲೈನ್ ಗೇಮಿಂಗ್ ಮೇಲೆ ನಿಷೇಧ ಹೇರಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.
ಆನ್ಲೈನ್ ರಮ್ಮಿ, ನಮ್ಮ 11, ಡ್ರೀಮ್ 11 ಸೇರಿದಂತೆ ಅನೇಕ ಆನ್ಲೈನ್ ಆಟದ ಚಟಕ್ಕೆ ಬಿದ್ದು ಅನೇಕ ಮಂದಿ ಹಣ ಕಳೆದುಕೊಂಡಿದ್ದಲ್ಲದೆ, ಕೆಲ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಸಿಎಂ ಉತ್ತರಿಸಿದ್ದಾರೆ.
ಶೀಘ್ರದಲ್ಲೇ ಈ ಕುರಿತಂತೆ ಕಾನೂನು ರೂಪಿಸಿ, ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಇಂಥ ಗೇಮಿಂಗ್, ಬೆಟ್ಟಿಂಗ್ನಲ್ಲಿ ತೊಡಗಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ, ಜೈಲಿಗೆ ಹಾಕಲಾಗುವುದು ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಆನ್ಲೈನ್ ಗೇಮಿಂಗ್, ಆನ್ ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ಈ ಕುರಿತಂತೆ ಕೂಡಲೇ ಕ್ರಮ ಜರುಗಿಸಿದ್ದು, ಕೇಂದ್ರ ಮಾಹಿತಿ ಮತ್ತು ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಅಕ್ಟೋಬರ್ 27ರಂದೇ ಪತ್ರ ಬರೆದಿದ್ದು, ಆನ್ ಲೈನ್ ಗೇಮಿಂಗ್ ನಿಷೇಧ ಮಾಡಲಾಗಿದೆ ಎಂದು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಅಚ್ಚರಿ ಎಂದರೆ ದೇಶದ ಪ್ರಮುಖ ಸೆಲೆಬ್ರಿಟಿಗಳು ಈ ಜೂಜಿನ ಆಟಕ್ಕೆ ರಾಯಭಾರಿಗಳಾಗಿರುವುದು ಮಾತ್ರ ದುರಂತ.