- ಅನ್ಲಾಕ್ 5.0 ಮಾರ್ಗಸೂಚಿ ಬಳಿಕವೂ ಸರ್ಕಾರದ ಸ್ಪಷ್ಟನೆ
ಬೆಂಗಳೂರು: ಕರೋನಾ ಅನ್ಲಾಕ್ 5.0 ಮಾರ್ಗಸೂಚಿ ನ.30ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ನಡುವೆ ರಾಜ್ಯದಲ್ಲಿ ಕಾಲೇಜುಗಳು ಆರಂಭವಾಗಲಿವೆಯೇ ಎಂಬ ಬಗ್ಗೆ ಈಗ ಗೊಂದಲ ಮೂಡಿದೆ. ರಾಜ್ಯ ಸರ್ಕಾರ ತನ್ನ ನಿರ್ಧಾರಕ್ಕೆ ಬದ್ಧ ಎಂದಿದೆ.
ಕರೋನಾ ಪರಿಸ್ಥಿತಿ ನೋಡಿಕೊಂಡು ಮತ್ತು ಶಿಷ್ಟಾಚಾರ ಪಾಲನೆ ಮಾಡಿಕೊಂಡು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಅದರಂತೆ ಕರ್ನಾಟಕ ಸರ್ಕಾರ ಪದವಿ ಕಾಲೇಜುಗಳನ್ನು ನವೆಂಬರ್ 17ರಂದು ತೆರೆಯಲಿದೆ ಎಂದು ಉನ್ನತ ಶಿಕ್ಷಣ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಕಾಲೇಜುಗಳಲ್ಲಿ ಸಿದ್ಧತೆ ನಡೆದಿದೆ. ಹಾಸ್ಟೆಲ್ ನಿರ್ವಹಿಸುವುದು ಕಷ್ಟ. ವಿದ್ಯಾರ್ಥಿಗಳನ್ನು ಹೇಗೆ ಇರಿಸಿಕೊಳ್ಳುವುದು ಎಂಬ ಗೊಂದಲ ಇದೆ. ಇಲಾಖೆ ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಗಳಲ್ಲಿ ತರಗತಿಗಳನ್ನು ನಡೆಸಲಿದೆ. ಹಾಸ್ಟೆಲ್ಗಳಲ್ಲಿ ಎಷ್ಟು ಮಂದಿ ದಾಖಲಾಗುತ್ತಾರೆ ಎಂದು ನೋಡಿಕೊಂಡು ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಬಸ್ಸು ಸೇವೆ ಮತ್ತು ಹಾಸ್ಟೆಲ್ಗಳನ್ನು ಆರಂಭಿಸುವಾಗ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.