- ಶೀತಗಾಳಿ, ಮೋಡದ ವಾತಾವರಣ
- ಅಡಿಕೆ,ಭತ್ತ ಬೆಳೆದ ರೈತರಿಗೆ ಆತಂಕ
ಬೆಂಗಳೂರು: ರಾಜ್ಯದಲ್ಲಿ ಈಶಾನ್ಯ ಮುಂಗಾರು ಚುರುಕಾಗಿದ್ದು, ಮೋಡ ಕವಿದ ವಾತಾವರಣ ಜೊತೆಗೆ ಅನೇಕ ಕಡೆ ಅಸಾಧಾರಣಾ ಮಳೆಯಾಗುವ ಸಾಧ್ಯತೆಗಳಿವೆ. ಇನ್ನು ದೀಪಾವಳಿ ದಿನ ಹಲವು ಕಡೆ ಮೋಡದ ವಾತಾವರಣ, ಶೀತಗಾಳಿ ಕಂಡು ಬಂದಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಾಗೂ ಪೂರ್ವ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾತಾವರಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಂದಾಗಿ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ತಣ್ಣನೆಯ ಗಾಳಿ ಬೀಸುತ್ತಿದೆ. ಇದರಿಂದ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದೂ ಹವಾಮಾನ ಇಲಾಖೆ ತಿಳಿಸಿದೆ.
ರೈತರಿಗೆ ಸಂಕಷ್ಟ!: ಚಳಿಗಾಲ ಶುರುವಾದರೂ ಇನ್ನೂ ಮಳೆಯ ಲಕ್ಷಣ ರೈತರಿಗೆ ಸಂಕಟ ತಂದಿದೆ. ಇದು ಕೊಯ್ಲು ಸಮಯವಾದ್ದರಿಂದ ಈಗ ಮಳೆ ಬಂದರೆ ನಷ್ಟ. ಮಲೆನಾಡು ಮತ್ತು ಕರಾವಳಿಯಲ್ಲಿ ಭತ್ತ ಮತ್ತು ಅಡಿಕೆ ಕೊಯ್ಲು ಶುರುವಾಗಿದ್ದು, ಆತಂಕ ಶುರುವಾಗಿದೆ.