- ಅತೀ ಬಣ್ಣನೆ ಸರಿಯಲ್ಲ: ಈಶ್ವರಪ್ಪ ಗುಟುರು
- ಬಿಜೆಪಿ ಅಂದರೆ ವ್ಯಕ್ತಿ ಅಲ್ಲ, ಸಂಘಟಿತ ಗೆಲುವು…
ಶಿವಮೊಗ್ಗ: ಸಿಎಂ ಯಡಿಯೂರಪ್ಪ ಪುತ್ರ ಬಿಜೆಪಿ ನಾಯಕ ವಿಜಯೇಂದ್ರ ಅವರ ಅತಿಯಾದ ಬಣ್ಣನೆ ಇದೀಗ ಪಕ್ಷದ ಹಿರಿಯ ನಾಯಕರಿಗೆ ಇರುಸು ಮುರುಸು ಉಂಟುಮಾಡಿದೆ. ಈ ಬಗ್ಗೆ ಸ್ವತಃ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರವರೇ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ಎಂದಿಗೂ ಒಬ್ಬ ವ್ಯಕ್ತಿಯ ಮೇಲೆ ಚುನಾವಣೆ ಮಾಡುವುದಿಲ್ಲ. ಸಂಘಟಿತ ಪ್ರಯತ್ನದಿಂದ ಚುನಾವಣೆ ಮಾಡಿ ಗೆಲುವು ಸಾಧಿಸುತ್ತಿದ್ದೇವೆ. ಆದರೆ, ವಿಜಯೇಂದ್ರ ಅವರನ್ನು ವೈಭವೀಕರಿಸುವ ಕೆಲಸಗಳನ್ನು ಕೆಲವರು ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದು, ಇದೀಗ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಪ್ರತಿ ಕ್ಷೇತ್ರಕ್ಕೂ 4-5 ಮಂದಿ ಉಸ್ತುವಾರಿಯಾಗಿ ನಮ್ಮ ನಾಯಕರು ನೇಮಿಸುತ್ತಾರೆ. ಅದೇ ಮಾದರಿಯಲ್ಲಿಯೇ ಶಿರಾ ಹಾಗೂ ರಾಜರಾಜೇಶ್ವರಿ ನಗರಕ್ಕೂ ಉಸ್ತುವಾರಿ ನೇಮಿಸಲಾಗಿತ್ತು. ಶಿರಾದಲ್ಲಿ ಕೆಲಸ ಮಾಡಿದಂತೆಯೇ ರಾಜರಾಜೇಶ್ವರಿ ನಗರದಲ್ಲಿ ಸಚಿವ ಅಶೋಕ್ ಅವರು ಕೆಲಸ ಮಾಡಿದ್ದಾರೆ. ಚುನಾವಣೆ ಗೆಲುವಿನಲ್ಲಿ ವಿಜಯೇಂದ್ರ ಅವರ ಪ್ರಯತ್ನವಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ವೈಭವೀಕರಿಸುವ ಕೆಲಸಗಳಾಗುತ್ತಿದೆ. ಆದರೆ, ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಆರ್.ಆರ್.ನಗರದಲ್ಲಿ ಸಚಿವ ಅಶೋಕ್, ಅಶ್ವತ್ಥ್ ನಾರಾಯಣ, ಪರಿಷತ್ನಲ್ಲಿ ಎಲ್ಲಾ ಸ್ಥಾನ ಗೆಲ್ಲಿಸಿದ್ದೇವೆ. ಎಲ್ಲಾ ಚುನಾವಣೆಯಲ್ಲಿ ಸಹ ನಾವು ಗೆಲುವು ಸಾಧಿಸಿದ್ದೇವೆ. ವಿಜಯೇಂದ್ರ ಪ್ರಯತ್ನ ಇದೆ, ಆದರೆ ಅತೀ ರಂಜಿತ ಸಲ್ಲ ಎಂದು ಹೇಳಿದರು.