- ಈಡಿಗ ಸಮುದಾಯದ ನಿಯೋಗಕ್ಕೆ ಸಿಎಂ ಅಭಯ
- 21 ಮಂದಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಭೇಟಿ
ಬೆಂಗಳೂರು: ಪ್ರಸಿದ್ಧ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯ ಇನ್ಮುಂದೆ ರಾಮಪ್ಪ ಅವರ ನೇತೃತ್ವದಲ್ಲೇ ನಡೆಯಲಿದೆ. ಉಸ್ತುವಾರಿ ಸಮಿತಿ ನಿಗಾ ಇಡಲಿದೆ. ದೇವಸ್ಥಾನವನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಶಾಸಕ ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ನಾಯಕ ಬೇಗುವಳ್ಳಿ ಸತೀಶ್ ಮುಂತಾದ ಈಡಿಗ ನಾಯಕರ ನೇತೃತ್ವದಲ್ಲಿ ಈಡಿಗ ಸಮುದಾಯದ ನಿಯೋಗ 21 ಮಂದಿ ಹಿಂದುಳಿದ ವರ್ಗದ ವಿವಿಧ ಮಠಾಧೀಶರ ಜತೆ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿ ಸಭೆ ನಡೆಸಲಾಯಿತು.
ಸಿಗಂದೂರು ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ಹಾಗೂ ಭಕ್ತರು ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಶಿವಮೊಗ್ಗ ಜಿಲ್ಲಾಡಳಿತ ನೇತೃತ್ವದ ದೇಗುಲ ಸಲಹಾ ಸಮಿತಿಗೆ ಈಡಿಗ ಸಮುದಾಯದ ಶ್ರೀ ರೇಣುಕಾನಂದ ಸ್ವಾಮೀಜಿ ಸೇರ್ಪಡೆ ಮಾಡಿಕೊಳ್ಳಲು ಇದೇ ವೇಳೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶ್ರೀಗಳ ಸಲಹೆ, ಮಾರ್ಗದರ್ಶನ ತೆಗೆದುಕೊಂಡು ಸಮಿತಿ ಕಾರ್ಯ ನಿರ್ವಹಿಸಲಿದೆ. ಈಗ ರಚನೆಯಾಗಿರುವ ಸಮಿತಿ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ. ದೇವಸ್ಥಾನದ ಆಡಳಿತ ರಾಮಪ್ಪ ಅವರ ನೇತೃತ್ವದಲ್ಲೇ ನಡೆಯಲಿದ್ದು, 4 ತಿಂಗಳ ಬಳಿಕ ಸಮಿತಿ ಇರಬೇಕೋ ಅಥವಾ ಕೈ ಬಿಡಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಸಭೆಯಲ್ಲಿ ತಿಳಿಸಿದ್ದಾರೆ.
ದೇವಾಲಯದ ಆಡಳಿತ ಈ ಹಿಂದೆ ನಡೆಯುತ್ತಿದ್ದ ಮಾದರಿಯಲ್ಲೇ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಿ ಎಂದು ನಿಯೋಗ ಸಿಎಂಗೆ ಮನವಿ ಮಾಡಿದಾಗ ದೇಗುಲವನ್ನು ಮುಜರಾಯಿ ವ್ಯಾಪ್ತಿಗೆ ತರುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.