- ಕರೋನಾ ನಡುವೆ ಸರಳ ಆಚರಣೆಗೆ ಸಿದ್ಧತೆ
ನವ ದೆಹಲಿ: ದೇಶದೆಲ್ಲೆಡೆ ಶುಕ್ರವಾರ ಈದ್ ಮಿಲಾದ್ ಸಂಭ್ರಮವನ್ನು ಮುಸ್ಲಿಂ ಸಮುದಾಯದವರು ಆಚರಿಸಲಿದ್ದಾರೆ. ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆ ಎಂದು ಸೂಫಿ ಅಥವಾ ಬರೇಲ್ವಿ ಚಿಂತನೆಯ ಮುಸ್ಲಿಂ ಅನುಯಾಯಿಗಳು ಈದ್ ಮಿಲಾದ್-ಅನ್-ನಬಿ ಅಥವಾ ಈದ್-ಎ-ಮಿಲಾದ್ ಎಂದು ಆಚರಿಸುತ್ತಾರೆ. ಈದ್ ಮಿಲಾದ್-ಅನ್-ನಬಿಯನ್ನು ಅರೇಬಿಕ್ ಆಡು ಭಾಷೆಯಲ್ಲಿ ನಬಿದ್ ಮತ್ತು ಮಾವ್ಲಿದ್ ಎಂದೂ ಕರೆಯುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೂರನೇ ತಿಂಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ, ಪ್ರವಾದಿ ಮುಹಮ್ಮದ್ ಅವರ ಅನುಯಾಯಿಗಳು ಒಟ್ಟಾಗಿ ಆಚರಿಸುತ್ತಾರೆ. ಸಾರ್ವಜನಿಕ ಮಸೀದಿಗಳಲ್ಲಿ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಶುಭ ದಿನದಂದು ತಮ್ಮ ಪ್ರೀತಿ ಪಾತ್ರರಿಂದ ಶುಭಾಶಯಗಳನ್ನು ಹಂಚಿಕೊಳ್ಳುತ್ತಾರೆ. ಈಗಾಗಲೇ ಹಬ್ಬಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ.
ಈದ್-ಎ ಮಿಲಾದ್ ದಿನ, ಜನರು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಮಸೀದಿ ಅಥವಾ ದರ್ಗಾದಲ್ಲಿ ಒಟ್ಟುಗೂಡುತ್ತಾರೆ. ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಪ್ರೀತಿ ಪಾತ್ರರೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಸಾಮಾಜಿಕ ಕೂಟಗಳನ್ನು ಆಯೋಜಿಸುತ್ತಾರೆ. ಆದರೆ ಕರೋನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ, ಕರೋನಾ ನಿಯಮದಂತೆ ಆಚರಿಸಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.