ಹತ್ಯೆಯಾದ ಯೋಗೇಶಗೌಡ ಪತ್ನಿ ಮಲ್ಲಮ್ಮನ ಶೋಚನೀಯ ಸ್ಥಿತಿ
ರಿಯಲ್ ಸ್ಟೋರಿ: ನಮ್ಮೂರ್ ಎಕ್ಸ್ಪ್ರೆಸ್: ಬಿ.ಕೆ.ಮಹೇಂದ್ರ
ಹುಬ್ಬಳ್ಳಿ: ಅತ್ತ ಪತಿಯನ್ನೂ ಕಳೆದುಕೊಂಡು ಇತ್ತ ಗಂಡನ ಕುಟುಂಬಸ್ಥರ ವಿಶ್ವಾಸವನ್ನೂ ಕಳೆದುಕೊಂಡಿರುವ ಕೊಲೆಯಾದ ಜಿಪಂ ಸದಸ್ಯ ಯೋಗೇಶ ಗೌಡ ಗೌಡನ ಪತ್ನಿ ಮಲ್ಲಮ್ಮ ಗೌಡರ್, ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಹಾಕಿಕೊಂಡು ಇಡೀ ಬದುಕು ನರಕವನ್ನಾಗಿಸಿಕೊಂಡರೇ..?
ಇಂತಹದೊಂದು ಯಕ್ಷ ಪ್ರಶ್ನೆ ಧಾರವಾಡ ಜಿಲ್ಲೆಯಾದ್ಯಂತ ಶ್ರೀಸಾಮಾನ್ಯರ ಬಾಯಿಯಿಂದ ಕೇಳಿ ಬರಲಾರಂಭಿಸಿದೆ. ಇದಕ್ಕೆ ಕಾರಣವೂ ಇಲ್ಲದ್ದಿಲ್ಲ. ಪತಿಯ ಕೊಲೆಯಾದ ಸಂದರ್ಭದಲ್ಲಿ ಆಗ ಸಚಿವರಾಗಿದ್ದ ವಿನಯ ಕುಲಕರ್ಣಿ ಸೇರಿದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿಯ ನಾಯಕರೊಂದಿಗೆ ತೊಡೆ ತಟ್ಟಿದ್ದ ಮಲ್ಲಮ್ಮ, ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಳ್ಳುವ ಮೂಲಕ ಇತ್ತ ಬಿಜೆಪಿ ಹಾಗೂ ಅತ್ತ ಗಂಡನ ಮನೆಯವರ ಆಕ್ರೋಶಕ್ಕೆ ಕಾರಣವಾಗಿದ್ದಳು.
ಅತಂತ್ರ ಸ್ಥಿತಿಯಲ್ಲಿ ಮಲ್ಲಮ್ಮ!: 2015ರಲ್ಲಿ ತನ್ನ ಪತಿಯನ್ನು ಹಾಡಹಗಲೇ ಕೊಲೆಯಾಗಿದ್ದಾರೆಂಬ ಸುದ್ದಿ ತಿಳಿದು ಗರಬಡಿದಂತೆ ಮಲ್ಲಮ್ಮ ಬಿದ್ದುಕೊಂಡಿದ್ದಳು. ಇಡೀ ಪ್ರಕರಣದಲ್ಲಿ ರಾಜಕೀಯ ಹಾಸುಹೊಕ್ಕಾಗಿದೆ ಎಂಬ ವಿಷಯ ತಿಳಿಯುತ್ತಲೇ ಆಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಗರು, ಯೋಗೇಶಗೌಡನ ಮನೆಗೆ ತೆರಳಿ ಸಂತಾಪದ ಹೊಳೆಯನ್ನೇ ಹರಿಸಿದ್ದರು. ಮಾತ್ರವಲ್ಲದೇ, ಇಡೀ ಪ್ರಕರಣ ಸಮರ್ಥವಾಗಿ ಬಳಸಿಕೊಳ್ಳಲು ಹವಣಿಸಿದ್ದರು.
ಆದರೆ, ರಾಜಕೀಯದ ಗಂಧಗಾಳಿಯೂ ಅರಿಯದ ಮುಗ್ದ ಮಲ್ಲಮ್ಮ, ಮೊದ-ಮೊದಲು ಬಿಜೆಪಿಗರ ಪ್ರತಿಯೊಂದು ಮಾತಿಗೆ ತಲೆ ಅಲ್ಲಾಡಿಸಿದ್ದಳು. ಇದು ಸಹಜವಾಗಿಯೂ ಆಗಿನ ಆಡಳಿತ ಪಕ್ಷದ ನಾಯಕರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಲಕರ್ಣಿ ಹಾಗೂ ಅವರ ಬೆಂಬಲಿಗರ ಕಣ್ಣು ಕೆಂಪಾಗಿಸಿತ್ತು. ಇಲ್ಲಿಂದ ಆರಂಭಗೊಂಡ ಈ ಕೊಲೆ ರಾಜಕಾರಣದಲ್ಲಿ ಮೈಕಾಸಿಕೊಳ್ಳಲು ರಾಜಕೀಯ ಪಕ್ಷಗಳು ಮಾತ್ರವಲ್ಲದೇ, ಅಧಿಕಾರಿಗಳು ಸಹಾ ರಾಜಕೀಯ ಮುಖಂಡರ ಕೃಪಾಕಟಾಕ್ಷೆ ಗಿಟ್ಟಿಸಿಕೊಳ್ಳು ಮಾಡಿದ ಹರಸಾಹಸ ಅಷ್ಟಿಷ್ಟಲ್ಲ.!
ಬಿಜೆಪಿಯಿಂದ ಸ್ಪರ್ಧೆ: ಪತಿ ಯೋಗೇಶ ಗೌಡನ ಕೊಲೆಯಾದ ನಂತರ, ನಡೆದ ರಾಜಕೀಯ ವಿದ್ಯಮಾನಗಳನ್ನು ಗ್ರಹಿಸದ ಮಲ್ಲಮ್ಮ, ಬಿಜೆಪಿಯಿಂದ ಜಿಲ್ಲಾ ಪಂಚಾಯ್ತಿಗೆ ಸ್ಪರ್ಧಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಸೋಲುಂಡರು. ಯೋಗೇಶ ಗೌಡನ ಕೊಲೆಯಿಂದಾಗಿ ಸಹಜವಾಗಿಯೇ ಅನುಕಂಪದ ಅಲೆಯಲ್ಲಿ ಮಲ್ಲಮ್ಮ ತೇಲಿ ಬರುತ್ತಾಳೆ ಎಂಬ ಬಿಜೆಪಿಗರ ಕನಸು ಇಲ್ಲಿಗೆ ನುಚ್ಚುನೂರಾಗಲಿಕ್ಕೆ ಸಾಕು. ದಿನಕಳೆದಂತೆ ಬಿಜೆಪಿ ಮಲ್ಲಮ್ಮಳ ಕಡೆಗಣಿಸಲಾರಂಭಿಸಿತು.
ಕಾಂಗ್ರೆಸ್ ಸೇರ್ಪಡೆ: ಈ ಮಧ್ಯೆ, ಎದುರಾದ 2018 ವಿಧಾನಸಭೆ ಚುನಾವಣೆಯಲ್ಲಿ ಮತ್ತೇ ಯೋಗೇಶ ಗೌಡನ ಕೊಲೆ ಪ್ರಕರಣವನ್ನು ಬಿಜೆಪಿಗರು ಧಾಳವನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆಯೇ ಎಚ್ಚತ್ತುಕೊಂಡ ಕಾಂಗ್ರೆಸ್ ಶತಾಯ-ಗತಾಯ ಮಲ್ಲಮ್ಮಳ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ತನ್ನ ಪತಿಯ ಕೊಲೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರ ಕೈವಾಡವಿದೆ ಎಂದು ಆರೋಪಿಸುತ್ತಲೇ ಬಂದಿದ್ದ ಮಲ್ಲಮ್ಮ, ಏಕಾಏಕಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು ಆಕೆಯ ಮನೆತನಕ್ಕೆ ಮಾತ್ರವಲ್ಲದೇ ಕ್ಷೇತ್ರ ಜನತೆಯಲ್ಲೂ ಸಾಕಷ್ಟು ಸಂಶಯ ಹುಟ್ಟು ಹಾಕಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
ಆದರೆ, ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮಲ್ಲಮ್ಮ, ತಾನು ಯಾವುದೇ ಆಮಿಷಕ್ಕೊಳಗಾಗಿ ಕಾಂಗ್ರೆಸ್ ಸೇರಿಲ್ಲ. ತನ್ನ ಮಕ್ಕಳ ಸುರಕ್ಷತೆಗಾಗಿ ಸೇರಿದ್ದೆ ಎಂದು ಹೇಳಿಕೊಂಡಿದ್ದಳು. ಇದೀಗ ಯೋಗೇಶ ಗೌಡನ ಕೊಲೆ ಪ್ರಕರಣದಲ್ಲಿ ಸೋಮವಾರವಷ್ಟೇ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದರೇ, ಅವರ ಸಹೋದರ ವಿಜಯ ಕುಲಕರ್ಣಿ ಹಾಗೂ ಕುಟುಂಬದ ಮತ್ತಿತರ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದನ್ನು ಮಲ್ಲಮ್ಮ, ಸ್ವಾಗತಿಸಿದ್ದಾರಲ್ಲದೇ ಈ ಕ್ರಮ ತಮಗೆ ಸಂತಸ ತಂದುಕೊಟ್ಟಿದೆ ಎಂದು ಹೇಳಿಕೊಂಡಿದ್ದು ಸಹಜವಾಗಿಯೇ ಕೈ ನಾಯಕರನ್ನು ಆಕ್ರೋಶಕ್ಕೀಡು ಮಾಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಕುಟುಂಬಸ್ಥರಿಂದ ದೂರವಾಗಿರುವ ಮಲ್ಲಮ್ಮ, ಅಕ್ಷರಶಃ ಅತಂತ್ರಳಾಗಿದ್ದಾಳೆ.