- ಮತ್ತೆ ಥಿಯೆಟರ್ನಲ್ಲಿ “ರಂಗಿ ತರಂಗ” ಸಿನಿಮಾ ಸದ್ದು
ಬೆಂಗಳೂರು: ಕರೋನಾ ಕಾರಣ ಬಂದ್ ಆಗಿದ್ದ ಚಿತ್ರ ಮಂದಿರಗಳ ಬಾಗಿಲು ತೆಗೆದಿದೆ. ಆದರೆ ಹೊಸ ಸಿನಿಮಾ ರಿಲೀಸ್ ಮಾಡುವಷ್ಟು ಧೈರ್ಯ ಈಗ ಸಿನಿಮಾ ತಂಡಕ್ಕಿಲ್ಲ. ಹೀಗಾಗಿ ಹೊಸ ಸಿನಿಮಾಗಳು ಈಗ ತೆರೆ ಕಾಣುವುದು ಕಷ್ಟ!. ಆದ್ದರಿಂದ ಹಳೆಯ ಯಶಸ್ವಿ ಚಿತ್ರಗಳು ಈಗ ಮರು ತೆರೆ ಕಾಣುತ್ತಿವೆ. ಈ ಸಾಲಿನಲ್ಲಿ ರಂಗಿತರಂಗ ಮತ್ತೆ ಸದ್ದು ಮಾಡಲಿದೆ.
ಲವ್ ಮಾಕ್ಟೇಲ್, ದಿಯಾ, ಕೋಟಿಗೊಬ್ಬ 2, ಜಂಟಲ್ಮನ್, ಕೆಜಿಎಫ್ 1, ರಂಗನಾಯಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಟಗರು ಮುಂತಾದ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆ ಇದೆ. ಸ್ಟಾರ್ ನಟರ ಹೊಸ ಸಿನಿಮಾಗಳು ಬಿಡುಗಡೆಯಾದರೆ ಗಲ್ಲಾಪೆಟ್ಟಿಗೆಯಲ್ಲಿ ಚೇತರಿಕೆ ಕಾಣುವ ಸಾಧ್ಯತೆ ಇದೆ. ರಂಗಿತರಂಗ ಮಾತ್ರವಲ್ಲದೆ ಅನೇಕ ಸಿನಿಮಾಗಳು ರೀ-ರಿಲೀಸ್ ಆಗಿವೆ.
2015ರಲ್ಲಿ ಸಂಪೂರ್ಣ ಹೊಸಬರ ತಂಡ ರಂಗಿತರಂಗ ಮಾಡಿತ್ತು. ನಿರ್ದೇಶಕ ಅನೂಪ್ ಭಂಡಾರಿ ಅವರ ಸಹೋದರ ನಿರೂಪ್ ಭಂಡಾರಿ ಹೀರೋ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿ ಎಂಟ್ರಿಯಾಗಿದ್ದರು.
ಅ.30ರಿಂದ ರಾಜ್ಯದ ಹಲವು ಥಿಯೇಟರ್ಗಳಲ್ಲಿ “ರಂಗಿತರಂಗ’ ಪ್ರದರ್ಶನ ಆರಂಭಿಸಿದೆ. ಇದು ಇಡೀ ತಂಡಕ್ಕೆ ಖುಷಿ ನೀಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ರಾಧಿಕಾ ನಾರಾಯಣ್. 365 ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ಸಿನಿಮಾದಲ್ಲಿ ನಟಿಸಿದ್ದೇನೆ ಎಂಬುದು ಒಂದು ಒಂದು ಗ್ರೇಟ್ ಫೀಲಿಂಗ್. 5 ವರ್ಷಗಳ ಬಳಿಕ ಆ ಚಿತ್ರ ಮತ್ತೆ ಬಿಡುಗಡೆ ಆಗುತ್ತದೆ ಎಂದರೆ ಆ ಫೀಲಿಂಗ್ ಇನ್ನಷ್ಟು ಹೆಚ್ಚುತ್ತದೆ’ ಎಂದು ಅವರು ಖುಷಿಪಟ್ಟಿದ್ದಾರೆ. ಈ ವರ್ಷ ರಾಧಿಕಾ ನಟಿಸಿದ್ದ ‘ಶಿವಾಜಿ ಸುರತ್ಕಲ್’ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು.