ಗ್ಯಾರಂಟಿ ಸೇವೆಗಾಗಿ 1 ಲಕ್ಷ ಸ್ವಯಂ ಸೇವಕರು!
– ಮನೆಮನೆಗೂ ತಲುಪಲಿವೆ ಸರಕಾರದ ಗ್ಯಾರಂಟಿ ಯೋಜನೆಗಳು
– ಸರ್ಕಾರಿ ಸೇವೆ ತಲುಪಿಸಲು ಸರ್ಕಾರದ ಮಾಸ್ಟರ್ ಪ್ಲಾನ್
NAMMUR EXPRESS NEWS
ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಒಂದು ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರ ನೇಮಕಾತಿಗಾಗಿ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲು ಸ್ವಯಂ ಸೇವಕರ ನೇಮಕ ಮಾಡುವಂತೆ ಆದೇಶ ಹೊರಡಿಸಿದೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದ ರಾಜ್ಯದ ಒಂದು ಲಕ್ಷಕ್ಕೂ ಹೆಚ್ಚು ಯುವ ಜನರಿಗೆ ಉದ್ಯೋಗ ಭಾಗ್ಯ ದೊರೆಯುವುದರ ಜೊತೆಗೆ ಎಲ್ಲಾ ಅರ್ಹ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರೆಯಲಿದೆ.
ಮನೆಮನೆಗೂ ಗ್ಯಾರಂಟಿ ಪ್ರಯೋಜನ
ರಾಜ್ಯದ ಬಡ ಹಾಗೂ ದುರ್ಬಲ ವರ್ಗದ ಜನರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ, ಗೃಹ ಜ್ಯೋತಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದು ಇನ್ನು ಹಲವಾರು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಐದು ಗ್ಯಾರಂಟಿ ಯೋಜನೆಗಳನ್ನ ರಾಜ್ಯದ ಮನೆಮನೆಗೂ ಸರಿಯಾದ ರೀತಿಯಲ್ಲಿ ತಲುಪಿಸಲು ಗ್ಯಾರಂಟಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರವು ನಿರ್ಧರಿಸಿದೆ.
ಯಾರು ಗ್ಯಾರಂಟಿ ಸ್ವಯಂ ಸೇವಕರಾಗಬಹುದು?
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಜನರಿಗೆ ಜಾರಿಗೆ ದೊರಕಿಸಿ ಕೊಡಲು ಗ್ಯಾರಂಟಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ರಾಜ್ಯದಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯ, ಆಶಾ ಕಾರ್ಯಕರ್ತರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳು ಗ್ಯಾರಂಟಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗ್ಯಾರಂಟಿ ಸ್ವಯಂ ಸೇವಕರ ಕರ್ತವ್ಯವೇನು?
ಗ್ಯಾರಂಟಿ ಸ್ವಯಂ ಸೇವಕರಾಗಿ ನೇಮಕಗೊಂಡವರು ಫಲಾನುಭವಿಗಳ ಪ್ರತಿ ಮನೆ ಮನೆಗೆ ಭೇಟಿ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅವರಿಗೆ ತಲುಪಿರುವ ಬಗ್ಗೆ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತ ಜನರ ಅಭಿಪ್ರಾಯ ಹಾಗೂ ಇದರ ಸದ್ಬಳಕೆ ಆಗುತ್ತಿರುವ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಗ್ಯಾರಂಟಿ ಸ್ವಯಂ ಸೇವಕರ ಕರ್ತವ್ಯವಾಗಿರುತ್ತದೆ. ಗ್ಯಾರಂಟಿ ಸ್ವಯಂ ಸೇವಕರಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗಳಿಗೆ ಸಂಬಳದ ಜೊತೆಗೆ 10 ರಿಂದ 15 ದಿನಗಳ ಅವಧಿಯಲ್ಲಿ ಒಂದು ಬಾರಿ ಒಬ್ಬರಿಗೆ ಮಾತ್ರ 1000 ರೂಪಾಯಿಯಂತೆ ಪ್ರೋತ್ಸಾಹಧನ ನೀಡಲು ಸರ್ಕಾರವು ತೀರ್ಮಾನ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗೃಹಲಕ್ಷ್ಮಿ ಅನುದಾನ ಬಳಕೆ
ಗ್ಯಾರಂಟಿ ಸ್ವಯಂ ಸೇವಕರ ಈ ಸಮೀಕ್ಷೆ ಕಾರ್ಯನ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದ್ದು; ಪ್ರತಿಯೊಬ್ಬ ಸ್ವಯಂ ಸೇವಕರಿಗೆ 100 ರಿಂದ 120 ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿ ಒಟ್ಟು 12 ಕೋಟಿಯಷ್ಟು ವೆಚ್ಚ ತಗುಲಲಿದ್ದು, ಗೃಹಲಕ್ಷ್ಮಿ ಯೋಜನೆಗಾಗಿ ಒದಗಿಸಲಾಗಿರುವ ಅನುದಾನದ ಮೊತ್ತದಲ್ಲಿ ಭರಿಸಲಾಗುವುದೆಂದು ತಿಳಿಸಲಾಗಿದೆ. ಸರಕಾರದ ಪಂಚ ಗ್ಯಾರಂಟಿಗಳ ಪೈಕಿ ‘ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ ಈಗಲೂ ಸಾಕಷ್ಟು ಗೊಂದಲಗಳು ಮುಂದುರೆದಿದ್ದು; ಲಕ್ಷಾಂತರ ಫಲಾನುಭವಿ ಮಹಿಳೆಯರಿಗೆ ಹಣ ಕೈಸೇರಿಲ್ಲ. ಈ ತೊಡಕು ನಿವಾರಣೆ ಮಾಡುವಲ್ಲಿ ಗ್ಯಾರಂಟಿ ಸ್ವಯಂ ಸೇವಕರು ಶ್ರಮಿಸಲಿದ್ದಾರೆ. ಅದೇ ರೀತಿ ಶಕ್ತಿ, ಯುವನಿಧಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸ್ವಯಂ ಸೇವಕರು ಶ್ರಮಿಸಲಿದ್ದಾರೆ ಎನ್ನಲಾಗುತ್ತಿದೆ.