ಒಟ್ಟಿಗೆ ಬಂತು 10 ಸಾವಿರ ಗೃಹಲಕ್ಷ್ಮೀ ಹಣ!
– ಹಣ ಬಾರದ ಮಹಿಳೆಯರಿಗೆ ಒಟ್ಟಿಗೆ ಹಣ ಜಮಾ
– ಫೆಬ್ರವರಿ ಅಂತ್ಯಕ್ಕೆ ಮತ್ತೊಂದು ಕಂತಿನ ಹಣ
– ನಿಮಗೆ ಹಣ ಬಾರದಿದ್ರೆ ಏನು ಮಾಡಬೇಕು?
NAMMUR EXPRESS NEWS
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈಗಾಗಲೇ ಐದು ಕಂತಿನ ಹಣ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗಿದೆ. 6ನೇ ಕಂತಿನ ಹಣ ಪಾವತಿಗಾಗಿ ಇಲಾಖೆ ಸಿದ್ಧತೆ ನಡೆಸಿದೆ. ಈ ನಡುವಲ್ಲೇ ಇದುವರೆಗೂ ಗೃಹಲಕ್ಷ್ಮೀ ಹಣ ಸಿಗದೇ ಇರುವವರಿಗೆ ಸರಕಾರ ಗುಡ್ನ್ಯೂಸ್ ಕೊಟ್ಟಿದೆ. ದಾಖಲೆ ಸರಿಯಾಗಿದ್ದವರ ಖಾತೆಗೆ ಹಣ ಜಮೆ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಿದ್ದವರ ಪೈಕಿ 8 ಲಕ್ಷ ಮಹಿಳೆಯರ ಖಾತೆಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಒಂದೇ ಒಂದು ಕಂತಿನ ಹಣ ಕೂಡ ಜಮೆ ಆಗಿಲ್ಲ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಯೊಂದನ್ನು ನೀಡಿದ್ದು, ಇದುವರೆಗೂ ಹಣ ಪಾವತಿ ಆಗದೇ ಇರುವ ಗೃಹಿಣಿಯರ ಖಾತೆಗಳಿಗೆ ಶೀಘ್ರದಲ್ಲಿಯೇ ಹಣ ಪಾವತಿಸುವ ಭರವಸೆಯನ್ನು ನೀಡಿದ್ದರು.
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಇದುವರೆಗೂ ಗೃಹಿಣಿಯರು 5 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ. ಒಟ್ಟಾರೆ 10 ಸಾವಿರ ರೂಪಾಯಿ ನೇರವಾಗಿ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ. ಇದೀಗ 6ನೇ ಕಂತಿನ ಹಣ ಫೆಬ್ರವರಿ ಅಂತ್ಯದ ಒಳಗಾಗಿ ಜಮೆ ಆಗಲಿದೆ. ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಹಣ ಸಿಗದೇ ಇರುವುದಕ್ಕೆ ತಾಂತ್ರಿಕ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಿದವರ ಪೈಕಿ ಅದೆಷ್ಟೋ ಮಂದಿ ಅರ್ಹ ಫಲಾನುಭವಿಗಳು ಇದ್ದಾರೆ. ಈಗಾಗಲೇ ಅಂತವರ ಖಾತೆಗಳಿಗೆ ಹಣ ವರ್ಗಾವಣೆ ಆಗಬೇಕಿತ್ತು. ಆದರೆ ಇಂದಿಗೂ ಒಂದೇ ಒಂದು ಕಂತಿನ ಹಣವೂ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ.
ಹಣ ಬಾರದಿದ್ರೆ ಏನು ಮಾಡಬೇಕು?
ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನೀಡುವ ಮೂಲಕ ಹಣ ಜಮೆ ಆಗದೇ ಇರುವುದಕ್ಕೆ ಎದುರಾಗಿರುವ ಸಮಸ್ಯೆಯನ್ನು ತಿಳಿದುಕೊಳ್ಳಬಹುದು. ತಾಂತ್ರಿಕ ಸಮಸ್ಯೆ ಎದುರಾಗಿದ್ದರೆ, ಅಧಿಕಾರಿಗಳು ಕೂಡ ಸಮಸ್ಯೆಯನ್ನು ಪರಿಹರಿಸಿ ಕೊಡಲಿದ್ದಾರೆ. ಒಂದೊಮ್ಮೆ ನಿಮ್ಮ ಅರ್ಜಿ ಅನುಮೋದನೆಗೆ ಬಾಕಿ ಉಳಿದಿದ್ದರೆ ಅಂತಹ ಸಂದರ್ಭದಲ್ಲಿ ಸಿಡಿಪಿಓ ಅವರು ನಿಮ್ಮ ಖಾತೆಯ ಕೆವೈಸಿ ಪ್ರಕ್ರಿಯೆ, ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಯೋಜನೆಯ ಲಾಭ ದೊರೆಯುವಂತೆ ಮಾಡುತ್ತಾರೆ. ನಿಮಗೆ ಹಣ ಬಂದಿಲ್ಲವಾದ್ರೆ ನೀವು ಕೂಡಲೇ ಬ್ಯಾಂಕ್ ಕೆವೈಸಿ, ಆಧಾರ್ ಕೆವೈಸಿ ಎನ್ಪಿಸಿಐ ಕೆವೈಸಿ ಆಗಿದೆಯೇ ಅನ್ನೋದನ್ನು ಒಮ್ಮೆ ಖಚಿತಪಡಿಸಿಕೊಳ್ಳಿ. ಎಲ್ಲಾ ಸಮಸ್ಯೆಗಳು ಪರಿಹಾರವಾದ ಕೂಡಲೇ ನಿಮ್ಮ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ನ ಖಾತೆಗಳಿಗೆ ಹಣ ಜಮೆ ಆಗಲಿದೆ.