ಅರಣ್ಯ ಭೂಮಿಯಲ್ಲಿ ಕೃಷಿ ತೆರವು!?
-137500 ಅರ್ಜಿದಾರರ ಪೈಕಿ 7000 ಜನರಿಗೆ ಮಾತ್ರ ಹಕ್ಕುಪತ್ರ!
– ಒತ್ತುವರಿಯಾದ 2 ಲಕ್ಷ ಎಕರೆ ಅರಣ್ಯ ಭೂಮಿ ತೆರವಿಗೆ ಸೂಚನೆ!
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯನ್ನು ಮೊದಲಿಗೆ ತೆರವುಗೊಳಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯಿದೆ ರಚಿಸಿದರೂ ಸುಮಾರು 2 ಲಕ್ಷ ಎಕರೆ ಅರಣ್ಯಭೂಮಿ ಒತ್ತುವರಿ ಆಗಿರುವುದು ಆಘಾತಕಾರಿ ವಿಷಯ ಎಂದರು.
ಯಾರೇ ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಅದು ಅಪರಾಧ. ಬೆಂಗಳೂರು ನಗರದ ಸುತ್ತಮುತ್ತ ಮತ್ತು ಪಟ್ಟಣ, ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡುವುದು ಅಗತ್ಯವಿದೆ ಎಂದು ಹೇಳಿದರು. ಈಗಾಗಲೇ ಕೊತ್ತನೂರಿನಲ್ಲಿ 400ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ರಕ್ಷಿಸಲಾಗಿದ್ದು, ಇದನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿದ್ದ ಉಪ ವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿಸಿದರು.
2 ಸಾವಿರ ಎಕರೆ ಒತ್ತುವರಿ ತೆರವು
ಅರಣ್ಯದಲ್ಲಿ ವನ್ಯ ಮೃಗಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅದಕ್ಕೆ ಅನುಗುಣವಾಗಿ ವನ್ಯ ಪ್ರದೇಶ ಹೆಚ್ಚಾಗುತ್ತಿಲ್ಲ. ಹೀಗಾಗಿ ಮಾನವ ಮತ್ತು ವನ್ಯ ಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಒತ್ತುವರಿ ತೆರವಿಗೆ ಅತ್ಯಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ತಾವು ಸಚಿವರಾದ ಬಳಿಕ 2 ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಎಂದು ತಿಳಿಸಿದರು. ಕಾಡಿನಂಚಿನಲ್ಲಿರುವ ಹಲವು ದಶಕಗಳ ಬೆಲೆಬಾಳುವ ವೃಕ್ಷಗಳನ್ನು ಕಡಿದು ಪಟ್ಟಾಭೂಮಿ ವಿಸ್ತರಣೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ ಈ ಬಗ್ಗೆ ಅರಣ್ಯದಂಚಿನ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಪ್ರಾಣಿಗಳ ಅಂಗಾಂಗ ವಾಪಸ್ಗೆ ಶೀಘ್ರ ನಿರ್ಧಾರ:
ರಾಜ್ಯದಲ್ಲಿ ಸಾರ್ವಜನಿಕರು ಇಟ್ಟುಕೊಂಡಿರುವ ಪ್ರಾಣಿಗಳ ಅಂಗಾಂಗಳನ್ನು ವಾಪಸ್ ಪಡೆಯುವ ಸಂಬಂಧ ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ. ವಾಪಸ್ ಪಡೆಯಲು 3 ತಿಂಗಳು ಕಾಲಾವಕಾಶ ನೀಡಬೇಕೆಂದು ನಿರ್ಧರಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಈಗ ಯಾರಾದರೂ ಪ್ರಾಣಿಗಳ ಅಂಗಾಂಗ ವಾಪಸ್ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸುವುದಿಲ್ಲ ಎಂದು ತಿಳಿಸಿದರು. ರಾಜ್ಯ ಸಭಾ ಸದಸ್ಯ ಜಗ್ಗೇಶ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಸೋದರ ಪ್ರಕರಣದಲ್ಲಿ ಕಾನೂನು ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.