ಲೋಕ ಸಭಾ ಚುನಾವಣೆಗೆ ಅಲರ್ಟ್!
– ಜಿಲ್ಲಾಧಿಕಾರಿಗಳ ಕಚೇರಿಯ ಸುತ್ತ ನಿಷೇಧಾಜ್ಞೆ
– ಮತದಾನ ಕೇಂದ್ರಗಳ ಪರಿಶೀಲನೆ: ಅಂತಿಮ ಸಿದ್ಧತೆ
NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು ಎಲ್ಲೆಡೆ ಬಿರುಸಿನ ಪ್ರಚಾರ ಶುರುವಾಗಿದೆ. ಈ ಹಿನ್ನೆಲೆ ಸಾರ್ವತ್ರಿಕ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಇದರಿಂದಾಗಿ ಜಿಲ್ಲಾಧಿಕಾರಿಗಳ ಕಛೇರಿಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿ ಮಾಡಲಾಗಿದೆ. ನಿಷೇದಾಜ್ಞೆ ಜಾರಿಯಲ್ಲಿರುವ ಸಮಯದಲ್ಲಿ 5 ಜನಕ್ಕಿಂತ ಹೆಚ್ಚುಮಂದಿ ಗುಂಪುಗೂಡುವುದು ಅಪಾಯಕಾರಿ ಶಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಷಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬ೦ದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಅಂತಹ ಮಾರಾಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು ಅಲ್ಲದೇ ಸಂಬ೦ಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು.
ಮತದಾನ ಕೇಂದ್ರಗಳ ಪರಿಶೀಲನೆ!
ಲೋಕಸಭಾ ಚುನಾವಣೆಯ ಹಿನ್ನಲೆ ಎಲ್ಲೆಡೆ ಮತದಾನ ಕೇಂದ್ರ ಹಾಗೂ ಮತ ಯಂತ್ರಗಳನ್ನು ಇಡುವ ಕಟ್ಟಡಗಳನ್ನು ಮತದಾನ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮತದಾನ ನಡೆಯುವ ಎಲ್ಲಾ ಕಟ್ಟಡಗಳಲ್ಲಿ ವಿದ್ಯುತ್, ಕುಡಿಯುವ ನೀರು, ಕೊಠಡಿಗಳ ಕಿಟಕಿ ಬಾಗಿಲು ಮತ್ತಿತರ ಸೌಕರ್ಯಗಳನ್ನು ಪರಿಶೀಲಿಸುತಿದ್ದು, ಆಕಸ್ಮಾತ್ ಸಮಸ್ಯೆ ಇದ್ದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸ್ಟಿದ್ಧತೆ ನಡೆದಿದೆ.