ಹೊಸ ವರ್ಷದ ಸಂಭ್ರಮಾಚರಣೆಗೆ ಎಲ್ಲೆಡೆ ಸಜ್ಜು!
– ಬಾರ್, ಪಬ್ಗಳಿಗೆ ಬಿಗಿ ನಿಯಮ: ಏನೇನು ನಿಯಮ?
– ಸಿಸಿಟಿವಿ ಕಡ್ಡಾಯ: ಬಾರ್, ವೈನ್ ಶಾಪ್ ಗಳಿಗೆ ನೋಟಿಸ್
NAMMUR EXPRESS NEWS
ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬಾರುಗಳು ಹಾಗೂ ಪಬ್ಗಳಿಗೆ ಬಿಗಿಯಾದ ರೂಲ್ಗಳನ್ನು ಜಾರಿ ಮಾಡಿದೆ. ಶಾಂತಿ ಸುವ್ಯವಸ್ಥೆ ಭಂಗಕ್ಕೆ ಕಾರಣವಾದರೆ ಇವುಗಳ ಲೈಸೆನ್ಸೇ ರದ್ದಾಗುವ ಚಾನ್ಸ್ ಇದೆ. ಪಬ್ಗಳ ಬಗ್ಗೆ ನಗರ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಎಲ್ಲಾ ಪಬ್ ಮಾಲೀಕರ ಜೊತೆ ಮಾತುಕತೆ ನಡೆಸಿ ಸೂಚನೆ ನೀಡಲಾಗಿದೆ. ಹೆಚ್ಚುವರಿ ಸಿಸಿಟಿವಿ, ಹೆಚ್ಚುವರಿ ಸಿಬ್ಬಂದಿ ಹಾಕಲಾಗುತ್ತಿದೆ. ಮದ್ಯ ಸೇವನೆ ಹಾಗೂ ಊಟಕ್ಕೆ ಮಾತ್ರ ಅವಕಾಶವಿದೆ. ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಗೆ ಅವಕಾಶವಿಲ್ಲ. ಅಂಥದು ನಡೆಯುತ್ತಿರುವುದು ಗೊತ್ತಾದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಒಂದು ವೇಳೆ ತಿಳಿಸದೆ ಇದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಪಬ್ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು. ಜೊತೆಗೆ ಕ್ರಿಮಿನಲ್ ಕೇಸ್ ಬೀಳುತ್ತದೆ.
ಸಿಸಿಟಿವಿ ಕ್ಯಾಮರಾ ಕಡ್ಡಾಯ..!
ಪಬ್ನ ಪ್ರತಿ ಮೂಲೆಯಲ್ಲೂ ಸಿಸಿಟಿವಿ ಅಳವಡಿಸಿರಬೇಕು. ಇರುವ ಕ್ಯಾಮರಾಗಳಿಗಿಂತ 50% ಹೆಚ್ಚುವರಿ ಕ್ಯಾಮರಾ ಅಳವಡಿಸಲು, ಈಗಿರುವ ಕ್ಯಾಮರಾಗಳ ಕಂಡಿಷನ್ ಬಗ್ಗೆ ಪರಿಶೀಲನೆಗೆ ಸೂಚನೆ ನೀಡಲಾಗಿದೆ. ಏನಾದರೂ ಘಟನೆ ಆದರೆ ಸಂಪೂರ್ಣ ಸಿಸಿಟಿವಿಯಲ್ಲಿ ಫುಟೇಜ್ ಸಿಗಬೇಕು. ಸಿಸಿಟಿವಿ ವರ್ಕ್ ಆಗಿಲ್ಲ ಎಂದು ನೆಪ ಹೇಳಿದರೆ ಕೇಸ್ ಬೀಳುವುದು ಗ್ಯಾರಂಟಿ. ಪಬ್ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದು ಜನಜಂಗುಳಿ ಹಾಗೂ ಯುವಕ-ಯುವತಿಯರ ದಂಡು ಹೆಚ್ಚು ಸೇರಿರುತ್ತದೆ. ಈ ವೇಳೆ ಕುಡಿದ ಮತ್ತಿನಲ್ಲಿ ಜಗಳ ಸೃಷ್ಟಿಯಾಗುವ ಸಾಧ್ಯತೆ ಇದೆ. ಕೆಲವರಿಂದ ಯುವತಿಯರಿಗೆ, ಹೆಣ್ಣುಮಕ್ಕಳಿಗೆ ಕಿರುಕುಳ ಸಾಧ್ಯತೆ ಇದೆ. ಈ ವೇಳೆ ರಕ್ಷಣೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಇರಬೇಕು. ಮಹಿಳಾ ಭದ್ರತಾ ಸಿಬ್ಬಂದಿ ನೇಮಕಕ್ಕೂ ಸೂಚನೆ ನೀಡಲಾಗಿದೆ.
ಬಾರ್, ವೈನ್ ಶಾಪ್ ನೋಟಿಸ್
ಎಲ್ಲ ಬಾರ್, ವೈನ್ ಶಾಪ್ಗಳಿಗೂ ಈ ಬಗ್ಗೆ ನೋಟೀಸ್ ಕೊಡಲು ನಗರ ಪೊಲೀಸ್ ಆಯುಕ್ತರು ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಸಂಬಂದ ಪಟ್ಟ ಬಾರ್ಗಳ ಮುಂದೆ ಅಥವಾ ಅದರ ಸಮಿಪ ಆಗುವ ದೊಂಬಿ, ಗಲಾಟೆ, ಹುಡುಗಿಯರ ಚುಡಾವಣೆ, ಕುಡಿದ ಅಮಲಿನಲ್ಲಿ ಬಾಟಲ್ ಎಸೆತ, ಹಲ್ಲೆ, ದೊಂಬಿ ಎಬ್ಬಿಸಲು ಯತ್ನ ಇತ್ಯಾದಿ ನಡೆದರೆ ಬಾರ್ ಮಾಲೀಕರೆ ಹೊಣೆಯಾಗುತ್ತಾರೆ. ಜೊತೆಗೆ ಗಲಾಟೆಗೆ ಕಾರಣವಾಗಿರುವ ಬಾರ್ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.