ವಿಶ್ವ ಕುಂದಾಪ್ರ ಕನ್ನಡ ದಿನದ ಸಂಭ್ರಮ!
– ದಿನವಿಡೀ ಕಾರ್ಯಕ್ರಮ: ಕುಂದಾಪುರದವರ ಸಮಾಗಮ
– ಸಿಎಂ, ರಿಷಬ್ ಶೆಟ್ಟಿ ಸೇರಿ ಸಾಧಕರ ಹಾಜರ್
NAMMUR EXPRESS NEWS
ಕುಂದಾಪುರ: ಕುಂದಾಪುರ ಭಾಷೆ ಬದುಕನ್ನು ಪ್ರಚುರಪಡಿಸಲು ವಿಶ್ವಕುಂದಾಪ್ರ ಕನ್ನಡ ದಿನ ರಾಜಧಾನಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಐದನೇ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವ ಕುಂದಾಪ್ರ ಕನ್ನಡ ಹಬ್ಬ ಜುಲೈ 23ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಶುರುವಾಗಿದ್ದು ರಾತ್ರಿ 9 ಗಂಟೆಯವರೆಗೆ ಅತ್ತಿಗುಪ್ಪೆಯಲ್ಲಿರುವ ಬಂಟರ ಭವನದಲ್ಲಿ ನಡೆಯಲಿದೆ.
ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉಪಸ್ಥಿತಿ ಇರಲಿದ್ದು, ಶಾಸಕರಾದ ಎಂ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆಯವರು, ಬಂಟರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಎಂ.ಮುರಳೀಧರ ಹೆಗ್ಡೆಯವರ ಉಪಸ್ಥಿತಿ ಇರಲಿದೆ.ಇದೇ ಸಂದರ್ಭದಲ್ಲಿ ಕುಂದಾಪುರದ ಹಿರಿಮೆಯನ್ನು ಇನ್ನಷ್ಟು ವಿಸ್ತರಿಸಿದ ಸಾಧಕರಾದ ಪ್ರೊ. ಎ.ವಿ ನಾವಡ ಮತ್ತು ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಇವರುಗಳು ಊರ ಗೌರವಕ್ಕೆ ಭಾಜನರಾಗಲಿದ್ದಾರೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಇನ್ನಿತರರು ಕಾರ್ಯಕ್ರಮದ ಮೆರಗು ಹೆಚ್ಚಿಸಲಿದ್ದಾರೆ.ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿ ಭಾಗದವರಾಗಿದ್ದು, ವಿಶ್ವಕುಂದಾಪ್ರ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಬೆಂಗಳೂರಿನಲ್ಲಿ ಲಕ್ಷಾಂತರ ಕುಂದಗನ್ನಡಿಗರಿದ್ದು ತಮ್ಮ ತಾಯಿಬೇರಿನ ಜತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ಕುಂದಾಪ್ರಕನ್ನಡ ಹಬ್ಬವು ಹೊಂದಿದೆ. ಈ ಸಂಭ್ರಮದ ಹಾದಿಯಲ್ಲಿ ಕಳೆದ ವರ್ಷ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಆರಂಭಗೊಂಡಿದ್ದು, ಸಮಸ್ತ ಕುಂದಗನ್ನಡಿಗರಿಗೆ ಹೆಮ್ಮೆಯ ವಿಷಯ.
ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆಯಾಗಲಿದ್ದು ಮುಖ್ಯವಾಗಿ ರಾಘವೇಂದ್ರ ಜನ್ಸಾಲೆಯವರ ನೇತೃತ್ವದಲ್ಲಿ ಸಿದ್ಧಪ್ರಸಿದ್ಧ ಕಲಾವಿದರಿಂದ ಬೇಡರ ಕಣ್ಣಪ್ಪ ಎನ್ನುವ ಯಕ್ಷಗಾನ ಪ್ರಸಂಗ, ಕಲಾಕದಂಬ ಆರ್ಟ್ಸ್ ಅವರಿಂದ ವೀರ ಬರ್ಬರಿಕ ಯಕ್ಷಗಾನ ಪ್ರಸಂಗ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಬಿಡುವನೇ ಬ್ರಹ್ಮಲಿಂಗ! ಎನ್ನುವ ನೃತ್ಯ ರೂಪಕ, ಕಿರುತೆರೆಯ ಖ್ಯಾತಿಯ ಶ್ರಾವ್ಯ ಮರವಂತೆ, ಸಮೃದ್ಧಿ ಕುಂದಾಪುರ, ಪ್ರೀತಂ ಅವರುಗಳು ಚಿತ್ರಪಟ ರಾಮಾಯಣ ಎಂಬ ಕಿರುನಾಟಕದ ಮೂಲಕ ರಂಜಿಸಲಿದ್ದಾರೆ. ಸಾಸ್ತಾನದ ಖ್ಯಾತ ನಾಟಕ ತಂಡ ಅಲ್ವಿನ್ ಅಂದ್ರಾದೆ ಮತ್ತು ಸಹಕಲಾವಿದರ ತಿಳಿ ಹಾಸ್ಯ ಪ್ರಹಸನ, ಟೀಂ ಕುಂದಾಪುರಿಯನ್ಸ್ ಅವರು ಮಿಂಚುಳ- ಇದ್ ಕತ್ಲಿ-ಬೆಳಗಿನ ಕಥಿ ಎಂಬ ವಿಶೇಷ ನಾಟಕವನ್ನು ನೆರೆದವರಿಗೆ ಕುಂದಾಪ್ರ ಕುರಿತಾಗಿ ಪ್ರದರ್ಶಿಸಲಿದ್ದಾರೆ.
ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್, ಸುಕ್ಕಿನ್ ಉಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ ನಂತಹ ವಿವಿಧ ಪಾನಕಗಳು, ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯಗಳು ಕುಂದಾಪ್ರ ಕನ್ನಡ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಕುಂದಾಪ್ರ ಕನ್ನಡ ದಿನಾಚರಣೆಗೆ ಕಳೆದ ಬಾರಿ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023