ಇ-ಸ್ವತ್ತು ನೋಂದಣೆ ಆಗುತ್ತಿಲ್ಲವೇ?
– ಇ-ಸ್ವತ್ತು ನೋಂದಣಿ ಏನು ಮತ್ತು ಹೇಗೆ?
– ಇಲ್ಲಿದೆ ನೋಂದಣಿಯ ಸರಳ ವಿಧಾನ
NAMMUR EXPRESS NEWS
ಬೆಂಗಳೂರು: ಗ್ರಾಮದ ಚಿಕ್ಕ ಪುಟ್ಟ ಕೆಲಸಗಳಿಂದ ಹಿಡಿದು ದೇಶದ ದೊಡ್ಡ ದೊಡ್ಡ ಕೆಲಸಗಳವರೆಗು ಲಂಚ ಹಾಸು ಹೊಕ್ಕಿದೆ. ಲಂಚ ಕೊಡದೇ ಎಲ್ಲಿಯೂ ಯಾವ ಕೆಲಸಗಳೂ ಆಗುವಂತೆ ಕಾಣುವುದಿಲ್ಲ. ಅದರಲ್ಲೂ ಗ್ರಾಮ ಪಂಚಾಯ್ತಿಯಂತಹ ಚಿಕ್ಕ ಮಟ್ಟದಲ್ಲಿ ಪೂರ್ತಿ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಆಗಿಲ್ಲ. ಪೂರ್ತಿ ಮ್ಯಾನ್ಯುಯಲ್ ಆಗಿಯೂ ಇಲ್ಲ. ಹಾಗಾಗಿ ಇ- ಸ್ವತ್ತು ಪಡೆಯಲು ವರ್ಷಾನುಗಟ್ಟಲೆ ಅಲೆದರೂ ಆಗುತ್ತಿಲ್ಲ.
ಹಾಗು ಪಿಡಿಓ ಗಳಿಗೆ ಲಂಚ ಕೊಡದೆ ಇದು ಅತ್ಯಂತ ಕ್ಲಿಷ್ಟ ಎಂದು ಜನಸಾಮಾನ್ಯರಿಂದ ದೂರು ಕೇಳಿ ಬರುತ್ತಿದ್ದು ಸರ್ಕಾರ ಆ ಬಗ್ಗೆ ಈಗ ಗಮನವಹಿಸಿದೆ. ಹಳ್ಳಿಗಳಲ್ಲಿ ಇರುವ ಸೈಟ್, ಮನೆ, ಕಟ್ಟಡಗಳಿಗೆ ಇ- ಖಾತಾ ಬಹಳ ಮುಖ್ಯವಾಗಿದೆ. ಇಲ್ಲವಾದರೆ ಕಾನೂನಿನಡಿ ಮಾನ್ಯತೆ ಇರುವುದಿಲ್ಲ. ಇ-ಖಾತಾ ಹೊಂದಿರುವ ಸ್ವತ್ತುಗಳನ್ನು ಉಪನೋಂದಣಿ ಕಚೇರಿಯಲ್ಲಿ ಸುಲಭವಾಗಿ ಈಗ ನೋಂದಾಯಿಸಬಹುದು. ಇ-ಸ್ವತ್ತು ಇಲ್ಲವಾದರೆ ದಾನಪತ್ರ, ಸೇಲ್ಡೀಡ್, ಬ್ಯಾಂಕ್ ಸಾಲ, ಹಕ್ಕು ಬಿಡುಗಡೆ ಪತ್ರ ಇನ್ನಿತರ ಕರಾರುಗಳನ್ನು ಉಪ ನೋಂದಣಿ ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಇ-ಸ್ವತ್ತು ಕಡ್ಡಾಯ ಮಾಡಲಾಗಿದೆ.
ನಮೂನೆ-9 ಮತ್ತು ನಮೂನೆ-11ನ್ನು ಪರಿಷ್ಕರಿಸುವ ಸಲುವಾಗಿ ಕರ್ನಾಟಕ ಪಂಚಾಯಿತಿ ರಾಜ್ ನಿಯಮಗಳಿಗೆ ಸರ್ಕಾರ ತಿದ್ದುಪಡಿ ಮಾಡಿದ್ದು, ನಿಯಮದ ಪ್ರಕಾರ ‘ಇ-ಸ್ವತ್ತು ಸಾಫ್ಟ್ವೇರ್ ಬಳಸಿ ಆನ್ಲೈನ್ ಮೂಲಕ ವಿತರಿಸಿದ ನಮೂನೆ-9 ಮತ್ತು ನಮೂನೆ-11ನ್ನು ಮಾತ್ರ ಆಸ್ತಿ ನೋಂದಣಿಗೆ ಬಳಸಬಹುದು. ಕೈಬರಹದ ಮೂಲಕ ನೀಡುವ ಹಾಗೂ ಹಳೆ ಮಾದರಿಯ ನಮೂನೆ 9 ಹಾಗೂ ನಮೂನೆ 11-ಇ ರದ್ದುಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ. ಇ-ಸ್ವತ್ತು ಕೊಡುವ ಜವಾಬ್ದಾರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ವಹಿಸಲಾಗಿದೆ.
ಇ-ಸ್ವತ್ತು ಪಡೆಯಲು ಸರಳ ವಿಧಾನ ಇಲ್ಲಿದೆ:-
– ಮಾಲೀಕನ ಫೋಟೊ, ಐಡಿ ಕಾರ್ಡ್, ಪಹಣಿ, ತೆರಿಗೆ ರಸೀದಿ, ಕಟ್ಟಡ ಅಥವಾ ಲೊಕೇಶನ್ ಫೋಟೋ ಕೊಟ್ಟು ಚಕ್ಕಬಂದಿ ಪಡೆಯಬೇಕು.
-ದ್ವಿತೀಯ ದರ್ಜೆ ಸಹಾಯಕ ಅಥವಾ ಕಾರ್ಯದರ್ಶಿ ಅರ್ಜಿ ಪಡೆದು ಇ-ಸ್ವತ್ತು ಸಾಫ್ಟ್ವೇರ್ ನಲ್ಲಿ ಅರ್ಜಿ ಅಪ್ಲೋಡ್ ಮಾಡಿಸಿ ಶುಲ್ಕ 50 ರೂಪಾಯಿ ಕಟ್ಟಬೇಕು.
-ಅರ್ಜಿ ಪಡೆದು 45 ದಿನಗಳಲ್ಲಿ ಇ-ಖಾತಾ ಪೂರ್ಣಗೊಳಿಸಬೇಕು.
-ಒಂದು ವೇಳೆ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಮನೆ ಅಥವಾ ನಿವೇಶನವಿದ್ದರೆ ಮೋಜಣಿಯಲ್ಲಿ ನಕ್ಷೆಗೆ (ಸರ್ವೇ )ಅರ್ಜಿ ಸಲ್ಲಿಸಿ ಆಸ್ತಿ ಮಾಲೀಕರು ಶುಲ್ಕ ಪಾವತಿ ಮಾಡಬೇಕು.
-ನಾಡ ಕಚೇರಿಯಲ್ಲಿ ಮೋಜಣಿಗೆ 800 ರೂಪಾಯಿ ಶುಲ್ಕ ಪಾವತಿಸಿದರೆ ತಾಲ್ಲೂಕು ಸರ್ವೇ ಅಧಿಕಾರಿ ಖುದ್ದು ಸ್ಥಳಕ್ಕೆ ಬಂದು ಅಳತೆ ಮಾಡಿ, ನಕ್ಷೆ ಸಿದ್ಧಪಡಿಸಿ, ಆನ್ಲೈನ್ನಲ್ಲಿ ಅಪ್ಲೋಡ್ ಮಾಡುತ್ತಾರೆ. 21 ದಿನಗಳ ಒಳಗೆ ಇ-ಸ್ವತ್ತು ಖಾತಾ ಕೊಡಬೇಕೆಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ. ಈ ಸರಳ ನಿಯಮಬದ್ಧ ಕ್ರಮವನ್ನು ಅನುಸರಿಸಿ ಸುಲಭವಾಗಿ ಗ್ರಾಮ ಪಂಚಾಯತಿಯಲ್ಲಿ ಆಸ್ತಿ ಇ-ಸ್ವತ್ತು ನೋಂದಣಿ ಮಾಡಿಸಬಹುದಾಗಿದೆ.