ಫ್ರೀ ಬಸ್ ಎಫೆಕ್ಟಾ?
– ಫ್ರೀ ಬಸ್ನಲ್ಲಿ ಮುಂದುವರಿದ ಕಿತ್ತಾಟ, ಹೆಣ್ಮಕ್ಕಳ ಚಪ್ಪಲಿ ಫೈಟಿಂಗ್!
– ಆಧಾರ್ ಕಾರ್ಡ್ ತೋರಿಸಮ್ಮ ಎಂದ ಲೇಡಿ ಕಂಡಕ್ಟರ್ ಮುಖವನ್ನೇ ಪರಚಿದಳು!
– ಜಸ್ಟ್ ಮುಟ್ಟಿದ್ದಕ್ಕೆ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿದ ಕಂಡಕ್ಟರ್!
NAMMUR EXPRESS NEWS
ಬೆಂಗಳೂರು: ಫ್ರೀ ಬಸ್ ಎಫೆಕ್ಟ್ನಿಂದಾಗಿ ಹೆಣ್ಮಕ್ಕಳ ಹೊಡಿಬಡಿ ಮುಂದುವರಿದಿದೆ. ಕೆಲವೆಡೆ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ವಾರ್ ನಡೆದರೆ, ಇತ್ತ ಮಹಿಳೆಯರು ಸೀಟು ವಿಚಾರದಿಂದ ಹಿಡಿದು ಕಿಟಕಿವರೆಗೆ ಕಿತ್ತಾಟ ಮುಂದುವರಿದಿದೆ. ಶಕ್ತಿ ಯೋಜನೆಯ ಸೈಡ್ ಎಫೆಕ್ಟ್ ಏನೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಸದ್ಯ ಫುಲ್ ರಷ್ ಆದ ಬಸ್ನಲ್ಲಿ ಮಹಿಳೆಯರಿಬ್ಬರು ಚಪ್ಪಲಿಯಲ್ಲಿ ಬಡಿದಾಡಿಕೊಂಡಿದ್ದಾರೆ. ಕಿಟಕಿ ತೆರಯುವ ವಿಚಾರಕ್ಕೆ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೆಜೆಸ್ಟಿಕ್ನಿಂದ ಪೀಣ್ಯಾ ಮಾರ್ಗವಾಗಿ ಹೊರಟ್ಟಿದ್ದ ಬಸ್ನಲ್ಲಿ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ರಾಜಾಜಿನಗರ ಸಮೀಪಿಸುವಾಗ ಕಿಟಕಿ ತೆಗೆಯುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿದ್ದಾರೆ. ಈ ವೇಳೆ ಚಪ್ಪಲಿ, ಶೂ ನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅವರ ಹೊಡೆದಾಟವನ್ನು ಬಸ್ನಲ್ಲಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಸೆರೆಯಿಡಿದಿದ್ದಾರೆ. ವಿಸ್ತಾರ ನ್ಯೂಸ್ಗೆ ಮಹಿಳೆಯರ ಚಪ್ಪಲಿ ಫೈಟ್ನ ವಿಡಿಯೋ ಲಭ್ಯವಾಗಿದೆ. ಇವರಿಬ್ಬರ ಗಲಾಟೆಯನ್ನು ಬಿಡಿಸಲು ಇತರೆ ಪ್ರಯಾಣಿಕರು ಮುಂದಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ಕಂಡಕ್ಟರ್ ಮಧ್ಯ ಪ್ರವೇಶದ ಬಳಿಕ ಗಲಾಟೆ ತಣ್ಣಗೆ ಆಗಿತ್ತು. ಮಹಿಳೆಯರಿಬ್ಬರ ಗಲಾಟೆಗೆ ಸಹ ಪ್ರಯಾಣಿಕರು ಛೀಮಾರಿ ಹಾಕಿದ್ದರು.
ಆಧಾರ್ ಕಾರ್ಡ್ ತೋರಿಸಮ್ಮ ಎಂದ ಲೇಡಿ ಕಂಡಕ್ಟರ್ ಮುಖವನ್ನೇ ಪರಚಿದಳು!
ಬೆಂಗಳೂರು : ಯುವತಿಯೊಬ್ಬಳು ಬಿಎಂಟಿಸಿ ಬಸ್ನ ಮಹಿಳಾ ಕಂಡಕ್ಟರ್ಗೆ ಹಲ್ಲೆ ನಡೆಸಿದ್ದಳು. ಬೆಂಗಳೂರಿನ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿತ್ತು. ಮೊನಿಷಾ ಎಂಬಾಕೆ ಬಿಎಂಟಿಸಿ ಕಂಡಕ್ಟರ್ ಸುಕನ್ಯಾ ಎಂಬುವವರಿಗೆ ಹಲ್ಲೆ ನಡೆಸಿದ್ದಳು. ಮತ್ತಿಕೆರೆ ಬಜಾಜ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿರುವ ಮೊನಿಷಾ ಬೆಳಗ್ಗೆ 9:45ಕ್ಕೆ ಬಿಎಂಟಿಸಿ ಬಸ್ ಏರಿದ್ದಳು. ಈ ವೇಳೆ ಕಂಡಕ್ಟರ್ ಸುಕನ್ಯಾ ಟಿಕೆಟ್ ಕೊಡುವ ಮುನ್ನ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮೊನಿಷಾಳ ಉಗುರು ಸುಕನ್ಯಾರ ಮುಖಕ್ಕೆ ಪರಚಿದೆ.
ನಂತರ ಇಬ್ಬರ ನಡುವೆ ಕಿತ್ತಾಟ ಶುರುವಾಗಿತ್ತು. ಇತರೆ ಪ್ರಯಾಣಿಕರು ಇವರಿಬ್ಬರ ಕಿತ್ತಾಟವನ್ನು ಬಿಡಿಸಲು ಮುಂದಾದರೂ ಸಾಧ್ಯವಾಗಿಲ್ಲ. ಇಬ್ಬರು ಆರೋಪ-ಪ್ರತ್ಯಾರೋಪವನ್ನು ಮಾಡಿಕೊಂಡಿದ್ದರು. ಕಂಡಕ್ಟರ್ ಸುಕನ್ಯಾ ಅವರೇ ಮೊದಲು ಹೊಡೆದಿದ್ದು, ಆಕಸ್ಮಿಕವಾಗಿ ಬೆರಳು ಅವರ ಮುಖಕ್ಕೆ ಪರಚಿದೆ ಅಷ್ಟೇ ಎಂದಿದ್ದರು. ಇತ್ತ ಇವರಿಬ್ಬರ ಜಗಳ ತರಾಕಕ್ಕೇರುತ್ತಿದ್ದಂತೆ ರಸ್ತೆ ಮಧ್ಯೆ ಬಸ್ ನಿಲ್ಲಿಸಲಾಗಿತ್ತು. ನಂತರ ಸಹ ಪ್ರಯಾಣಿಕರು ಯುವತಿಗೆ ತರಾಟೆ ತೆಗೆದುಕೊಂಡಿದ್ದರು
ಜಸ್ಟ್ ಮುಟ್ಟಿದ್ದಕ್ಕೆ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿದ ಕಂಡಕ್ಟರ್!
ಧಾರವಾಡ: ತಾಳ್ಮೆ ಕಳೆದುಕೊಂಡ ಬಸ್ ಕಂಡಕ್ಟರ್ವೊಬ್ಬ ವಿದ್ಯಾರ್ಥಿನಿಯ ಕಪಾಳಕ್ಕೆ ಭಾರಿಸಿರುವ ಘಟನೆ ಧಾರವಾಡದ ಕೆಲಗೇರಿ ಬಡಾವಣೆ ಬಳಿ ನಡೆದಿತ್ತು. ಕೆಲಗೇರಿ ನಿವಾಸಿಯಾದ ಪ್ರಕೃತಿ ಎಂಬಾಕೆಗೆ ಕಂಡಕ್ಟರ್ ಕಪಾಳಮೋಕ್ಷ ಮಾಡಿದ್ದರು. ಸಾಧನಕೆರೆಯಲ್ಲಿ ಶಾಲೆಯಿಂದ ಮರಳಿ ಮನೆಗೆ ವಾಪಸ್ ಬರುವಾಗ ಈ ಘಟನೆ ನಡೆದಿತ್ತು. ಧಾರವಾಡದಿಂದ ಮುಗದ ಗ್ರಾಮಕ್ಕೆ ಬಸ್ವೊಂದು ತೆರಳುತಿತ್ತು. ರಶ್ ಇದ್ದ ಬಸ್ಸಿನಲ್ಲಿ ಕಂಡಕ್ಟರ್ ಹಣವನ್ನು ಎಣಿಸಲು ಮುಂದಾಗಿದ್ದರು. ಈ ವೇಳೆ ಅಚಾನಕ್ ಆಗಿ ವಿದ್ಯಾರ್ಥಿನಿ ಪ್ರಕೃತಿಯ ಬ್ಯಾಗ್ ಕಂಡಕ್ಟರ್ಗೆ ಟಚ್ ಆಗಿತ್ತು.
ಆಗ ಕಂಡಕ್ಟರ್ ಕೈಯಲ್ಲಿದ್ದ ಟಿಕೆಟ್ ಹಣವು ಕೆಳಗೆ ಬಿದ್ದಿತ್ತು. ಇದರಿಂದ ಕೆರಳಿ ಕೆಂಡವಾದ ಕಂಡಕ್ಟರ್ ಸಿಟ್ಟಿನಲ್ಲಿ ವಿದ್ಯಾರ್ಥಿನಿಯ ಕಪಾಳಕ್ಕೆ ಹೊಡೆದಿದ್ದರು. ಕಂಡಕ್ಟರ್ ಹೊಡೆತಕ್ಕೆ ಕೆನ್ನೆ ಮೇಲೆ ಬರೆ ಬಿದ್ದಿತ್ತು. ನೋವಿನಿಂದ ಬಸ್ ಇಳಿದ ಬಾಲಕಿ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಬಾಲಕಿಗೆ ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ್ದಕ್ಕೆ ಆಕ್ರೋಶಗೊಂಡ ಪಾಲಕರು ಹಾಗೂ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಕಂಡಕ್ಟರ್ ವರ್ತನೆಗೆ ಕಿಡಿಕಾರಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಕಂಡಕ್ಟರ್ ಇಲ್ಲಿಗೆ ಬಂದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದರು. ಬಳಿಕ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದರು. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಬಂದ ಕಂಡಕ್ಟರ್ ಪಾಲಕರ ಬಳಿ ಕ್ಷಮೆ ಕೇಳಿದ್ದರಿಂದ ಪ್ರಕರಣವು ಸುಖಾಂತ್ಯ ಕಂಡಿತ್ತು.