18 ವರ್ಷ ಆಗ್ದಿದ್ರೆ ಬೈಕ್, ಕಾರು ಓಡ್ಸಿದ್ರೆ ಹುಷಾರ್!
– 18 ವರ್ಷ ಮೀರದ ಮಕ್ಕಳಿಂದ ವಾಹನ ಚಾಲನೆ
– ಒಂದೇ ದಿನ 1800 ಮಕ್ಕಳ ಪೋಷಕರಿಗೆ ದಂಡ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 18 ವರ್ಷ ವಯಸ್ಸಾಗದ, ಚಾಲನಾ ಪರವಾನಗಿ ಹೊಂದಿಲ್ಲದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಬೈಕ್ ರೈಡ್ ಮಾಡಿದ ವಿಚಾರವಾಗಿ ಒಂದೇ ದಿನದಲ್ಲಿ ನಗರದಲ್ಲಿ 1800 ಮಕ್ಕಳ ಪೋಷಕರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಶಾಲಾ ಕಾಲೇಜುಗಳ ಬಳಿಯೇ ಹೋಗಿ ವಿದ್ಯಾರ್ಥಿಗಳು ತಂದ ವಾಹನಗಳನ್ನು ತಡೆದು ಡಿಎಲ್ ಹಾಗೂ ವಯಸ್ಸು ತಪಾಸಣೆ ಮಾಡಿದ್ದಾರೆ. ನಗರದ ಒಟ್ಟು 150ಕ್ಕೂ ಹೆಚ್ಚು ಶಾಲೆಗಳಲ್ಲಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸುಮಾರು 1500ಕ್ಕೂ ಹಚ್ಚು ವಿದ್ಯಾರ್ಥಿಗಳು ನಿಯಮ ಉಲ್ಲಂಘನೆ ಮಾಡಿರೋದು ಪತ್ತೆಯಾಗಿದೆ. ಬಳಿಕ ಅವರ ಪೋಷಕರನ್ನು ಕರೆಸಿ ದಂಡ ವಿಧಿಸಿ ವಾಹನಗಳನ್ನು ಮಕ್ಕಳ ಕೈಗೆ ಕೊಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಪೋಷಕರನ್ನು ಕರೆಸಿ ದಂಡ ವಿಧಿಸಿದ ಪೊಲೀಸರು, ಪುನಃ ಇದೇ ರೀತಿ ಮಾಡಿದರೆ ಎಫ್ಐಆರ್ ದಾಖಲಿಸುವುದಾಗಿ ಪೋಷಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಅಲ್ಲದೆ, ಶಾಲೆಗಳಿಂದ ಸುತ್ತೋಲೆ ಕೂಡ ಹೊರಡಿಸಲು ಸೂಚನೆ ನೀಡಿದ್ದಾರೆ.
ಶಾಲಾ ಮಕ್ಕಳು ಬೈಕ್ ರೈಡ್ ಮಾಡಿಕೊಂಡು ತೆರಳುತ್ತಿರವುದು ಅಪಘಾತಗಳಿಗೂ ಕಾರಣವಾಗುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಸಂಚಾರ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.