ಇಸ್ರೋ ಅಧ್ಯಕ್ಷ ಸೋಮನಾಥ್ಗೆ ಕ್ಯಾನ್ಸರ್..!
– ಆದಿತ್ಯ-ಎಲ್1 ಉಡಾವಣೆ ದಿನವೇ ಪತ್ತೆ
– ಸಂದರ್ಶನದಲ್ಲಿ ಬಹಿರಂಗ
NAMMUR EXPRESS NEWS
ಬೆಂಗಳೂರು: ಇಸ್ರೋ ಸಂಸ್ಥೆ ಮಾತ್ರವಲ್ಲ ಇಡೀ ದೇಶವೇ ಸಂಭ್ರಮದಲ್ಲಿ ಇದ್ದ ದಿನವೇ ಇಸ್ರೋ ಮುಖ್ಯಸ್ಥರಿಗೆ ಆಘಾತಕಾರಿ ಸುದ್ದಿ ಕಾದಿತ್ತು. ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್ – 1 ಯೋಜನೆಯ ಉಪಗ್ರಹವನ್ನು ಹೊತ್ತ ರಾಕೆಟ್ ಗಗನಕ್ಕೆ ಚಿಮ್ಮಿದ ದಿನವೇ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರಿಗೆ ಕ್ಯಾನ್ಸರ್ ದೃಢಪಟ್ಟಿತ್ತು. 2023ರ ಆರಂಭದಿಂದಲೇ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಚಂದ್ರಯಾನ – 3 ಯೋಜನೆ ಅನ್ವಯ ರಾಕೆಟ್ ಉಡಾವಣೆಗೊಂಡ ಹೊತ್ತಲ್ಲೂ ಸೋಮನಾಥ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ, ಅದು ಮಾರಣಾಂತಿಕ ಕ್ಯಾನ್ಸರ್ ಇರಬಹುದು ಅನ್ನೋ ಕಲ್ಪನೆಯೇ ಇರಲಿಲ್ಲ. ಬಳಿಕ ನಡೆದ ಆರೋಗ್ಯ ತಪಾಸಣೆಗಳ ವೇಳೆ ಸೋಮನಾಥ್ ಅವರ ಹೊಟ್ಟೆಯಲ್ಲಿ ಗಡ್ಡೆ ರೀತಿ ಬೆಳವಣಿಗೆ ಪತ್ತೆಯಾಗಿದ್ದು, ಇದಕ್ಕೆ ಶಸ್ತ್ರ ಚಿಕಿತ್ಸೆ ಹಾಗೂ ಕಿಮೋ ಥೆರಪಿ ಅಗತ್ಯತೆ ಇದೆ ಎಂದು ವೈದ್ಯರು ಹೇಳಿದ್ದರು.
ಈ ಕುರಿತಾಗಿ ಖಾಸಗಿ ಮಾಧ್ಯಮ ಸಂಸ್ಥೆಯ ಸಂದರ್ಶನವೊಂದಲ್ಲಿ ಇದೇ ಮೊದಲ ಬಾರಿಗೆ ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ತಮ್ಮ ಆರೋಗ್ಯ ಸಮಸ್ಯೆಯನ್ನು ಸುದೀರ್ಘವಾಗಿ ವಿವರಿಸಿದ್ದಾರೆ. ಸೂರ್ಯನ ಅಧ್ಯಯನಕ್ಕಾಗಿ ರೂಪಿಸಲಾಗಿದ್ದ ಆದಿತ್ಯ – ಎಲ್ 1 ಉಪಗ್ರಹವನ್ನು ಹೊತ್ತ ರಾಕೆಟ್ ಗಗನಕ್ಕೆ ಚಿಮ್ಮಿದ ದಿನವೇ ನಾನು ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದೆ. ಈ ವೇಳೆ ನನ್ನ ಹೊಟ್ಟೆಯಲ್ಲಿ ಅಸಹಜ ಬೆಳವಣಿಗೆ ಕಂಡು ಬಂದಿತ್ತು. ಆದಿತ್ಯ ನೌಕೆ ಉಡಾವಣೆಯಾದ ನಂತರ ನಾನು ಚೆನ್ನೈಗೆ ತೆರಳಿ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಿಕೊಂಡೆ. ಈ ವೇಳೆ ನನಗೆ ಇರುವ ಸಮಸ್ಯೆ ದೃಢವಾಯ್ತು. ಇದಾದ ಬಳಿಕ ನಾನು ವಿಶ್ರಾಂತಿ ಪಡೆದೆ ಹಾಗೂ ಹಲವು ಪರೀಕ್ಷೆಗಳನ್ನು ಮಾಡಿಸಿಕೊಂಡೆ ಎಂದು ಸೋಮನಾಥ್ ವಿವರಿಸಿದ್ದಾರೆ. ಆದಿತ್ಯ – ಎಲ್ 1 ಉಪಗ್ರಹ ಉಡಾವಣೆಯಾದ ಒಂದು ತಿಂಗಳ ಬಳಿಕ ವೈದ್ಯರ ಸಲಹೆ ಮೇರೆಗೆ ಸೋಮನಾಥ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾದರು.
ಆಪರೇಷನ್ ಬಳಿಕ ಕಿಮೋಥೆರಪಿ ಚಿಕಿತ್ಸೆಯನ್ನೂ ಸೋಮನಾಥ್ ಅವರು ಪಡೆದಿದ್ದಾರೆ. 2023ರ ಸೆಪ್ಟೆಂಬರ್ 2 ರಂದು ಆದಿತ್ಯ ಎಲ್ 1 ಉಪಗ್ರಹವನ್ನು ಹೊತ್ತ ರಾಕೆಟ್ ಗಗನಕ್ಕೆ ಚಿಮ್ಮಿತ್ತು. ಇದು ಭಾರತದ ಮೊಟ್ಟ ಮೊದಲ ಸೂರ್ಯ ಅಧ್ಯಯನ ಯೋಜನೆ. ಈ ಯೋಜನೆ ಅಡಿ ಉಪಗ್ರಹ ಎಲ್ 1 ಪಾಯಿಂಟ್ ಅನ್ನು ಜನವರಿ ವೇಳೆಗೆ ತಲುಪಿತು. ಭೂಮಿಯಿಂದ 1.5 ಮಿಲಿಯನ್ ಕಿಲೋ ಮೀಟರ್ ದೂರದಲ್ಲಿ ಉಪಗ್ರಹ ನೆಲೆಗೊಂಡಿದೆ. ಉಪಗ್ರಹದ ಒಳಗೆ ಇರುವ 7 ಪೇಲೋಡ್ಗಳು ನಿರಂತರವಾಗಿ ಸೂರ್ಯನ ಅಧ್ಯಯನದಲ್ಲಿ ತೊಡಗಿವೆ. ಚಂದ್ರಯಾನ, ಆದಿತ್ಯ ಯಾನ, ಗಗನ ಯಾನ ಹಾಗೂ ಶುಕ್ರಯಾನ ಸೇರಿದಂತೆ ಹಲವು ಯೋಜನೆಗಳು ಎಸ್. ಸೋಮನಾಥ್ ಅವರ ಅಧಿಕಾರಾವಧಿಯಲ್ಲಿ ವೇಗ ಪಡೆದುಕೊಂಡಿವೆ. ಈ ಹೊತ್ತಲ್ಲೇ ಇಸ್ರೋ ಮುಖ್ಯಸ್ಥರ ಅನಾರೋಗ್ಯದ ಕುರಿತ ಸುದ್ದಿ ಬೇಸರ ತರಿಸುವಂತಿದೆ.