ಕರಾವಳಿ ಕಂಬಳಕ್ಕೆ ರಾಜಧಾನಿ ಸಜ್ಜು!
– ಮೊಟ್ಟ ಮೊದಲ ಬೆಂಗಳೂರುಲ್ಲಿ ಕಂಬಳ
– 300 ಕೋಣಗಳ ಬಲಾಬಲ ಪ್ರದರ್ಶನ
– ನ.25, 26ಕ್ಕೆ ಲಕ್ಷ ಲಕ್ಷ ಜನ ಸೇರುವ ನಿರೀಕ್ಷೆ
– ಕರಾವಳಿಯಲ್ಲೂ ಕಂಬಳ ರಂಗು ಶುರು
NAMMUR EXPRESS NEWS
ಮಂಗಳೂರು: ಮೊದಲ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕಂಬಳ ರಾಜಧಾನಿಯಲ್ಲಿ ನಡೆಯಲಿದೆ. ಈ ಕಂಬಳಕ್ಕೆ ಕರಾವಳಿ ವಿವಿಧ ಭಾಗದಿಂದ 300ಕ್ಕೂ ಹೆಚ್ಚು ಕೋಣಗಳು ಆಗಮಿಸಲಿವೆ. ನ.25 ಮತ್ತು 26ರಂದು ಎರಡು ದಿನ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ಕಂಬಳಪ್ರಿಯರ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಜನರ ನಿರೀಕ್ಷೆಗಳು, ಉತ್ಸಾಹ ಮುಗಿಲುಮುಟ್ಟಿವೆ.
ಕಂಬಳ ಇತಿಹಾಸದಲ್ಲೇ ಇದು ಹೊಸ ಮೈಲುಗಲ್ಲು ಸೃಷ್ಟಿಸುವ ಸಾಧ್ಯತೆ ಇದೆ. ‘ಈಗಾಗಲೇ 155 ಮೀಟರ್ ಉದ್ದದ ಕಂಬಳ ಕರೆಗಳ ನಿರ್ಮಾಣ ಬಹುತೇಕ ಪೂರ್ಣವಾಗಿದೆ. ಕಂಬಳದ ಎರಡು ದಿನಗಳ ಅವಧಿಯಲ್ಲಿ ಅಂದಾಜು 8 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ’ ಎಂದು ಕಂಬಳದ ರೂವಾರಿ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಹೇಳಿದ್ದಾರೆ.
ಕಂಬಳಕ್ಕಾಗಿ ಕೋಣಗಳ ತಯಾರಿ ಬಾರಿ ಜೋರಾಗಿ ನಡೆಯುತ್ತಿದೆ
ಮೊದಲ ಕಂಬಳ ಶುರು
ಶನಿವಾರ ಕಂಬಳದ ಸೀಸನ್ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ಶನಿವಾರ ಈ ಸೀಸನ್ ನ ಪ್ರಥಮ ಕಂಬಳ ಸಂಸದ ನಳಿನ್ ಕುಮಾರ್ ಮತ್ತು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆದಿದೆ. ಜಿಲ್ಲೆಯ ಹೊರಗೆ ನಡೆಯುವ ಪ್ರಥಮ ಕಂಬಳ ಇದಾಗಿರುವ ಕಾರಣ ಕೋಣಗಳನ್ನು ವರ್ಷವಿಡೀ ತಯಾರು ಮಾಡಿಕೊಂಡಿರಬೇಕು. ಹಾಗೆಯೇ ಹವಾಮಾನ ಬದಲಾವಣೆಗೆ ಕೋಣಗಳೂ ಒಗ್ಗಿಕೊಳ್ಳಬೇಕು. ಇದಕ್ಕಾಗಿಯೇ ಸಕಲ ತಯಾರಿಗಳು ನಡೆಯುತ್ತಿವೆ.
300 ಕೋಣಗಳು ಬರಲಿವೆ!
ಕೋಣಗಳ ಯಜಮಾನರ ಆಗ್ರಹದಂತೆ ಕೋಣಗಳ ಕ್ಷಮತೆ, ಆರೋಗ್ಯ ಕಾಪಾಡುವ ಹಿನ್ನೆಲೆಯಲ್ಲಿ ನೀರನ್ನೂ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಕೊಂಡೊಯ್ಯಲಾಗುತ್ತದೆ. ಘಟ್ಟ ಹತ್ತಲಿವೆ 150 ಲಾರಿಗಳು, 300 ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು 150 ಲಾರಿಗಳಲ್ಲಿ 300 ಕೋಣಗಳು ಸಾಗುತ್ತವೆ. ಅಂದರೆ ಒಂದು ಲಾರಿಯಲ್ಲಿ 2 ಕೋಣಗಳು ಸಾಗುತ್ತವೆ. ಅವುಗಳಿಗೆ ಉಪ್ಪಿನಂಗಡಿಯಲ್ಲಿ ಬೀಳ್ಕೊಡಲಾಗುತ್ತದೆ ನವೆಂಬರ್ 23ರಂದು ಬೆಳಗ್ಗೆ 10 ಗಂಟೆಗೆ ಉಪ್ಪಿನಂಗಡಿಯಿಂದ ಕೋಣಗಳು ಲಾರಿಯಲ್ಲಿ ಹೊರಡುತ್ತವೆ. ಹಾಸನದಲ್ಲಿ ಭವ್ಯ ಸ್ವಾಗತ ಅವುಗಳಿಗೆ ದೊರಕಲಿದೆ. ಅಲ್ಲಿ ಎರಡು ಗಂಟೆಗಳ ಕಾಲ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಅಲ್ಲಿಂದ ಬೆಂಗಳೂರಿಗೆ ತೆರಳಲಾಗುತ್ತದೆ.
ಕಂಬಳ ವೀಕ್ಷಣೆಗೆ ಸಿನಿ ತಾರೆಯರ ದಂಡು
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡೆ ಕಂಬಳ ವೀಕ್ಷಣೆಗೆ ಸಿನಿತಾರೆಯರ ದಂಡೇ ಆಗಮಿಸುವ ನಿರೀಕ್ಷೆ ಇದೆ. ಬಾಲಿವುಡ್, ಸಹಿತ ಪಾನ್ ಇಂಡಿಯಾ ಸ್ಟಾರ್ ಗಳು ಆಗಮಿಸಲಿದ್ದಾರೆ. ಅವರಲ್ಲದೆ, ಗಣ್ಯರು, ಉನ್ನತ ಅಧಿಕಾರಿಗಳು ಕಂಬಳ ನೋಡಲು ಬರುತ್ತಾರೆ. ವಿಶೇಷವಾಗಿ ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ ಕಂಬಳ ನೋಡಲು ಬರುತ್ತಾರೆ. ಕಂಬಳ ವೀಕ್ಷಿಸಲು ಗ್ಯಾಲರಿ, 150ಕ್ಕೂ ಅಧಿಕ ಕರಾವಳಿ ವೈವಿಧ್ಯತೆ ಸಾರುವ ಆಹಾರ, ತಿಂಡಿ, ತಿನಿಸುಗಳು, ವಸ್ತುಪ್ರದರ್ಶನದ ಮಳಿಗೆಗಳನ್ನು ತೆರೆಯಲಾಗುತ್ತದೆ. ಜೋಡುಕರೆ (ಎರಡು ಅಂಕಣ) ಈಗಾಗಲೇ ರೆಡಿ ಆಗುತ್ತಿದೆ.