ಶಾಲಾ ಶಿಕ್ಷಕರ ಸಂಘದಿಂದ ಹಲವು ಬೇಡಿಕೆ!
– ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೋಧನೆ ಸ್ಥಗಿತ.!
– ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಕೆ!
NAMMUR EXPRESS NEWS
ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಕ್ಷಣ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ರಾಜ್ಯಾದ್ಯಂತ ಬೋಧನೆ ಸ್ಥಗಿತಗೊಳಿಸಿ ಅಸಹಕಾರ ಚಳವಳಿ ನಡೆಸಲು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಕೆ.ನಾಗೇಶ, ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸೇವಾನಿರತ ಪದವೀಧರ ಶಿಕ್ಷಕರಲ್ಲಿ ಬೇಧ ಮಾಡದೆ ಸರ್ಕಾರವು ‘ಪದವೀಧರ ಶಿಕ್ಷಕರು’ ಎಂದು ಪರಿಗಣಿಸಬೇಕು. ಹೊಸ 2016 ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪೂರ್ವಾನ್ವಯಗೊಳಿಸಬಾರದು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಕ್ಷಣ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಮಾಲೋಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲು ಸಭೆ ಆಯೋಜಿಸಬೇಕು. ಶಿಕ್ಷಕರ ತಾಳ್ಮೆಗೂ ಒಂದು ಮಿತಿ ಇದೆ. ತಾಳ್ಮೆಯನ್ನು ದೌರ್ಬಲ್ಯ ಎಂದು ಪರಿಗಣಿಸಬಾರದು. ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಬೋಧನೆ ಸ್ಥಗಿತಗೊಳಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ವಿವರಿಸಿದ್ದಾರೆ.