ಹೆಚ್ಚುತ್ತಿದೆ ಆನ್ಲೈನ್ ವಂಚನೆ: ಕೋಟಿ ಕೋಟಿ ಮೋಸ!
– ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್, ವೆಬ್ ಅಸ್ತ್ರ
– ಖದೀಮರ ಜಾಲಕ್ಕೆ ಬೀಳದಿರಿ ಹುಷಾರ್!
– ಜಾಗೃತಿ ಬಗ್ಗೆ ಬರಲಿದೆ ವಿಶೇಷ ಸರಣಿ ವರದಿ
NAMMUR EXPRESS NEWS
ಬೆಂಗಳೂರು: ಕಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಆನ್ಲೈನ್ ಸುಲಿಗೆ, ವಂಚನೆ ಕೇಸುಗಳ ಸಂಖ್ಯೆಯೂ ದಿನೇ ದಿನೇ ಏರಿಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವಹಾರಕ್ಕೆ ಬಹುತೇಕರು ಆನ್ಲೈನ್ ಸಂಪರ್ಕವನ್ನೇ ಅವಲಂಬಿಸಿದ್ದಾರೆ. ನಗದು ಕಳುಹಿಸುವುದು ಹಾಗೂ ಪಡೆಯುವುದು ಆನ್ಲೈನ್ನಲ್ಲಿ ಸುಲಭ ಎಂಬುದು ಇದಕ್ಕೆ ಮುಖ್ಯ ಕಾರಣ. ಇದನ್ನೇ ಬಂಡವಾಳವಾಗಿಟ್ಟುಕೊಂಡಿರುವ ಖದೀಮರು ಆನ್ಲೈನ್ ಮೂಲಕವೇ ದೋಖಾ ಮಾಡುತ್ತಿದ್ದಾರೆ. ಫೇಸ್ಬುಕ್ ಪೇಜ್ ಹ್ಯಾಕ್ ಮಾಡಿ ಅಲ್ಲೇ ಮೆಸೇಜ್ ಮಾಡಿ ಹಣವನ್ನು ಕೇಳಲಾಗುತ್ತಿದೆ. ವಾಟ್ಸಪ್ ಮೂಲಕ ಸಂಪರ್ಕಿಸಿ, ಲಿಂಕ್ ಕಳುಹಿಸಿ ಹಣ ಕಟ್ ಮಾಡಿಕೊಳ್ಳಲಾಗುತ್ತಿದೆ. ಕರೆ ಮಾಡಿ ಸುಳ್ಳು ಮಾಹಿತಿ ನೀಡಿ ಮೋಸ ಮಾಡಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಆನ್ಲೈನ್ ಮೋಸ
ಗ್ರಾಮೀಣ ಭಾಗದಲ್ಲಂತೂ ವಂಚನೆ ಪ್ರಕರಣ ಹೆಚ್ಚಾಗಿವೆ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಇಂದಿಗೂ ಬಹುತೇಕರಿಗೆ ಆನ್ಲೈನ್ ಬಳಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಹಾಗಾಗಿ ವಂಚನೆ ಪ್ರಕರಣ ಹೆಚ್ಚುತ್ತಲೇ ಇವೆ. ನಗರ ಮತ್ತು ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆಯನ್ನು ತೆರೆದರೂ ವಂಚನೆ, ಸುಲಿಗೆ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಎಲ್ಲೋ ಕುಳಿತ ವ್ಯಕ್ತಿಗಳು ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸುತ್ತಿದ್ದಾರೆ. ವೆಬ್ಸೈಟ್, ಎಟಿಎಂಗಳಿಗೂ ಕನ್ನ ಹಾಕಿ ಅತ್ಯಮೂಲ್ಯ ಮಾಹಿತಿ ಕಳವು ಮಾಡುತ್ತಿದ್ದಾರೆ.
ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ಪ್ ಮೂಲಕ ವಂಚನೆ, ಸುಲಿಗೆ ಮಾಡಲು ನಿತ್ಯ ಅನಗತ್ಯ ಕರೆಗಳು ನಿಮ್ಮ ಮೊಬೈಲ್ಗೆ ಬರುತ್ತಲೇ ಇರುತ್ತವೆ. ನಿಮಗೆ ಯಾವುದೋ ಸ್ಕೀಮ್ ನಲ್ಲಿ ಉಡುಗೊರೆ ಬಂದಿದೆ, ನಿಮ್ಮ ಖಾತೆಗೆ 1 ಲಕ್ಷ ರೂ. ಬಹುಮಾನ ಬಂದಿದೆ. ನಿಮ್ಮ ಆಧಾರ್ ಕಾರ್ಡ್, ಅಕೌಂಟ್ ಮಾಹಿತಿ ಕೊಡಿ, ಎಟಿಎಂ ಕಾರ್ಡ್ ನಂಬರ್ ನೀಡಿ, ಒಟಿಪಿ ನಂಬರ್ ಕೊಡಿ ಎಂದು ಹೇಳಿಕೊಂಡು ಕರೆಗಳು ಬಂದರೆ ಅದಕ್ಕೆ ಉತ್ತರಿಸಬೇಡಿ. ಯಾರಾದರೂ ಕರೆ ಮಾಡಿ ನಿಮ್ಮ ಖಾಸಗಿ ಮಾಹಿತಿ ಕೇಳಿದರೆ ಕೊಡಬೇಡಿ. ಕೂಡಲೇ ಸ್ಥಳೀಯ ಠಾಣೆ ಗಮನಕ್ಕೆ ತನ್ನಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಸಾರ್ವಜನಿಕರು ಆನ್ಲೈನ್ ಖದೀಮರ ಬಗ್ಗೆ ಜಾಗರೂಕರಾಗಿರಬೇಕು. ಬ್ಯಾಂಕಿಗೆ ನೇರ ಹೋಗಿ ವ್ಯವಹಾರ ಮಾಡಬೇಕು. ಫೋನ್ ಮೂಲಕ ಬ್ಯಾಂಕ್ ಮಾಹಿತಿ ಕೇಳಿದರೆ ಕೊಡಬೇಡಿ. ಒಟಿಪಿ, ಎಟಿಎಂ ಕಾರ್ಡ್ ನಂಬರ್ ಶೇರ್ ಮಾಡಬಾರದು. ಮೊಬೈಲ್ನಲ್ಲೂ ನಿಮ್ಮ ಖಾಸಗಿ ಮಾಹಿತಿಯನ್ನು ಸೇವ್ ಮಾಡಬಾರದು. ಎಟಿಎಂಗೆ ಹೋಗುವ ಮುನ್ನ ಯಾವುದಾದರೂ ಗೌಪ್ಯ ವಸ್ತು ಇಟ್ಟಿದ್ದಾರಾ? ಎಂಬುದನ್ನು ಪರಿಶೀಲಿಸಬೇಕು. ಸೆಕ್ಯೂರಿಟಿ ಇರುವ ಎಟಿಎಂಗಳನ್ನೇ ಬಳಸಬೇಕು ಹೀಗೆ ಅನೇಕ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿದೆ.