ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವಿಗೆ ಆರ್ಡರ್!
– ಅಧಿಕಾರಿಗಳಿಗೆ ಸರ್ಕಾರದ ಸೂಚನೆ
– ಬರದ ಹಿನ್ನೆಲೆ ಅರಣ್ಯದೊಳಗೆ ಮೇವು, ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಸೂಚನೆ
– ಮಲೆನಾಡು, ಕರಾವಳಿ ಜನರಿಗೆ ಹೆಚ್ಚು ತೊಂದರೆ?!
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಒತ್ತುವರಿಯಾಗಿರುವ ಅರಣ್ಯ ಭೂಮಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ. ಆದ್ದರಿಂದ ಇದೀಗ ಮಲೆನಾಡು, ಕರಾವಳಿ ಸೇರಿ ರಾಜ್ಯದಲ್ಲಿ ಅರಣ್ಯ ಪ್ರದೇಶ ಒತ್ತುವರಿ ತೆರವಿಗೆ ಸರ್ಕಾರ ಮುಂದಾಗಲಿದೆ. ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯ ಕಾರ್ಯಪಡೆ ನೂತನ ಮುಖ್ಯಸ್ಥ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಯಾವ ಭೂಮಿ ಎಂಬ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಅರಣ್ಯ ಪಡೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ದೀಕ್ಷಿತ್, ಗುರುವಾರ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯದಲ್ಲಿ ಒಂದು ಲಕ್ಷ ಎಕರೆಗೂ ಅಧಿಕ ಅರಣ್ಯ ಭೂಮಿ ಒತ್ತುವರಿ ಆಗಿದ್ದು, ಅರಣ್ಯ ಭೂಮಿ ಮತ್ತು ಸಂಪತ್ತು ಕಾಪಾಡಲು ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಾರಿ ಮಳೆ ಕೊರತೆ ಇದ್ದು ವನ್ಯಜೀವಿಗಳು ಆಹಾರ ಮತ್ತು ನೀರು ಅರಸಿ ನಾಡಿಗೆ ಬಂದು ಜೀವ ಹಾನಿ, ಬೆಳೆ ಹಾನಿ ಮಾಡುವುದನ್ನು ತಡೆಯಲು ಅರಣ್ಯದೊಳಗೆ ಮೇವು ಮತ್ತು ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಎಲ್ಲಾ ವಲಯಗಳಿಗೆ ಸೂಚಿಸಬೇಕು ಎಂದು ಸಚಿವರು ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಮಲೆನಾಡು, ಕರಾವಳಿಯಲ್ಲೇ ಅತೀ ಹೆಚ್ಚು: ಜನರದ್ದು ತಪ್ಪಲ್ಲ!
ಮಲೆನಾಡು ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ಅನೇಕ ಭಾಗಗಳಲ್ಲಿ ಜನ ಮತ್ತು ಅರಣ್ಯ ಸಂಘರ್ಷ ಹೆಚ್ಚಿದೆ. ಇಲ್ಲಿ ಜನರ ತಪ್ಪಲ್ಲ. ಆದರೆ ಇಲಾಖೆ ಕೂಡ ಬಿಡುತ್ತಿಲ್ಲ. ಇದೀಗ ಈ ಆದೇಶ ಜನರಿಗೆ ಮತ್ತಷ್ಟು ಭಯ ಹುಟ್ಟಿಸಿದೆ.