ಪಿಜಿ-ಸಿಇಟಿ ಅರ್ಜಿ ಸಲ್ಲಿಕೆ ಯಡವಟ್ಟು..!
– 34 ಸಾವಿರ ಅರ್ಜಿ ಸಲ್ಲಿಕೆ : ಮಂಗಳೂರು ಕೇಂದ್ರ ಉಡುಪಿಗೆ
– ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ: ಸಮಯ ಅವಕಾಶಕ್ಕೆ ಪಟ್ಟು
NAMMUR EXPRESS NEWS
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸರ್ವರ್ ಡೌನ್ ಆಗಿರುವುದರಿಂದ ಇಂಜಿನಿಯರಿಂಗ್ ಸೇರಿ ಇನ್ನಿತರ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸುವ ಪಿಜಿಸಿಇಟಿ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.
ಅರ್ಜಿ ಸಲ್ಲಿಸಲು ಸೋಮವಾರವೇ (ಜೂನ್ 17) ಕೊನೆಯ ದಿನವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಸರ್ವರ್ ಡೌನ್ ಆಗಿರುವುದರಿಂದ ಹಾಗೂ ಭಾನುವಾರ ಮತ್ತು ಸೋಮವಾರ ಸರ್ಕಾರಿ ರಜೆಯಾಗಿರುವ ಕಾರಣ ಕೆಇಎ ಕಚೇರಿಗೆ ಕರೆ ಮಾಡಿದರೂ ಯಾರು ಸ್ವೀಕರಿಸುವವರಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
34 ಸಾವಿರ ಅರ್ಜಿ ಸಲ್ಲಿಕೆ : ಎಂ. ಇ. ಎಂ. ಟೆಕ್ ಆರ್ಕಿಟೆಕ್ಚರ್, ಎಂಬಿಎ, ಎಂಸಿಎ ಕೋರ್ಸ್ ಗಳ ಪ್ರವೇಶವನ್ನು ಪಿಜಿಸಿಇಟಿ ಮೂಲಕವೇ ಪ್ರವೇಶ ಕಲ್ಪಿಸಲಾಗುತ್ತದೆ. ಮೇ 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜೂನ್ 17 ಕೊನೆಯ ದಿನವಾಗಿದೆ. ಇಲ್ಲಿಯವರೆಗೂ ಎಂಬಿಎ ಕೋರ್ಸ್ ಗಳಿಗೆ 21,026 ಎಂಸಿಎಗೆ 9,961 ಮತ್ತು ಎಂಇ /ಎಂಟೆಕ್ ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ 4,344 ಅರ್ಜಿಗಳು ಸೇರಿ ಒಟ್ಟು 34,212 ಅರ್ಜಿಗಳು ಸಲ್ಲಿಕೆಯಾಗಿದೆ.
ಏನು ಸಮಸ್ಯೆ? : ಮೀಸಲಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆಯನ್ನು ನಮೂದಿಸುವ ವೇಳೆ ಕಂದಾಯ ಇಲಾಖೆಯ ಬ್ಯಾಕೆಂಡ್ ಡೇಟಾ ದೊಂದಿಗೆ ಪರಿಶೀಲಿಸಲಾಗುತ್ತದೆ. ಆದರೆ ಕಳೆದ ಮೂರು ದಿನಗಳಿಂದ ಕಂದಾಯ ಇಲಾಖೆಯ ಸರ್ವರ್ ಡೌನ್ ಆಗಿದ್ದು, ಸಮಸ್ಯೆ ಉಂಟಾಗಿದೆ.
ಮಂಗಳೂರು ಕೇಂದ್ರ ಉಡುಪಿಗೆ : ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪಿಜಿಸಿಇಟಿ ಪರೀಕ್ಷಾ ಕೇಂದ್ರ ಇಲ್ಲದಿರುವುದಕ್ಕೆ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಜಿಸಿಇಟಿ ಪರೀಕ್ಷೆಗೆ ಯಾವುದೇ ಪರೀಕ್ಷಾ ಕೇಂದ್ರ ನೀಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಬೇಕಾಯಿತು ಎಂದು ಮಂಗಳೂರಿನ ಅಭ್ಯರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಎರಡು ಜಿಲ್ಲೆಗಳ ಕೇಂದ್ರ ಭಾಗದಲ್ಲಿರುವುದರಿಂದ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಚ್ಚು ಅನುಕೂಲವಾಗಲಿದೆ. ಬಸ್ಸು ಮತ್ತು ರೈಲು ಸೇರಿ ಸಾರಿಗೆ ಸಂಪರ್ಕವೂ ಉತ್ತಮವಾಗಿದೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.