ರಾಜ್ಯಕ್ಕೆ ರಾಜಕೀಯ ಚಾಣಕ್ಯ ಅಮಿತ್ ಶಾ ಎಂಟ್ರಿ!
– 2 ದಿನ ರಾಜ್ಯ ಪ್ರವಾಸ: ಬಿಜೆಪಿ ಮಾಸ್ಟರ್ ಪ್ಲಾನ್
– ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ
NAMMUR EXPRESS NEWS
ಬೆಂಗಳೂರು: ಲೋಕಸಭಾ ಚುನಾವಣೆ ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ರಣತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ. ಈ ವಿಚಾರವಾಗಿ ರಾಜ್ಯಕ್ಕೆ ಮೂವರು ನಾಯಕರು ಭೇಟಿ ನೀಡಲಿದ್ದಾರೆ. ಫೆ 10 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ. ಫೆಬ್ರವರಿ 10 ಮತ್ತು 11ರಂದು ಕರ್ನಾಟಕದಲ್ಲಿ ಅಮಿತ್ ಶಾ ಪ್ರವಾಸ ಕೈಗೊಳ್ಳಲಿದ್ದು ಚುನಾವಣೆಗೆ ರಣತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಹುಬ್ಬಳ್ಳಿಗೆ ಅಮಿತ್ ಶಾ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಕ್ಲಸ್ಟರ್ ಸಭೆಗಳನ್ನು ಮೂರು ನಾಯಕರು ನಡೆಸಲಿದ್ದಾರೆ.
28 ಲೋಕಸಭಾ ಕ್ಷೇತ್ರಗಳನ್ನು ಎಂಟು ಸಂಘಟನಾ ಕ್ಲಸ್ಟರ್ಗಳಾಗಿ ವಿಂಗಡಣೆ ಮಾಡುವ ಕುರಿತು ಒಂದು ಬಾರಿಯ ಭೇಟಿಯ ವೇಳೆ 2 ಕ್ಲಸ್ಟರ್ ಗಳ ಸಭೆ ನಡೆಸಲಿದ್ದಾರೆ ಎಂದು ಹೇಳಲಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆಯ ಸಿದ್ಧತೆ ಸೇರಿದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಸ್ಥಾನಗಳ ಹಂಚಿಕೆ ಹಾಗೂ ಕೆಲವು ಹಿರಿಯ ನಾಯಕರ ಅಹ ವಾಲುಗಳ ಬಗ್ಗೆ ಅಮಿತ್ ಶಾ ಅವರು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಅಲ್ಲದೆ 11 ರಂದು ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದು, ಅದೇ ವೇಳೆ ಕಾಂಗ್ರೆಸ್ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರ ಹೆಸರಿನ ಅತಿಥಿಗೃಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮಿತ್ ಶಾ ಅವರು ಆಗಮಿಸುತ್ತಿದ್ದು, ಇದೇ ವೇಳೆ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಕೋರ್ಕಮಿಟಿ ಸಭೆ ನಡೆಸುವ ಸಂಭವವಿದೆ ಎನ್ನಲಾಗಿದೆ. ಇತ್ತೀಚೆಗೆ ರಾಜ್ಯ ಬಿಜೆಪಿಯ ನಾಯಕರಾದ ವಿ.ಸೋಮಣ್ಣ ಬಸನಗೌಡ ಪಾಟೀಲ್ ಯತ್ನಾಳ ಅವರು ಅಹವಾಲು ಹೊತ್ತು ದೆಹಲಿಗೆ ತೆರಳಿದ್ದ ವೇಳೆ ಅಮಿತ್ ಶಾ ಅವರು ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ವೇಳೆ ರಾಜ್ಯ ನಾಯಕರೊಂದಿಗೆ ಸಭೆ ನಡೆಸುತ್ತೇನೆ ಎಂಬ ಮಾಹಿತಿ ನೀಡಿದ್ದರು. ಹೀಗಾಗಿ, ಆ ಭೇಟಿ ಇದೇ ಆಗಬಹುದು ಎಂಬ ಮಾತು ಬಿಜೆಪಿ ಪಾಳಯದಿಂದ ಕೇಳಿಬರುತ್ತಿದೆ.