ಮಳೆ ಸೂಚನೆ: ಜನರಿಗೆ ಖುಷಿ!
– ರಾಜ್ಯದ ಜನತೆಗೆ ಹವಾಮಾನ ಇಲಾಖೆ ಗುಡ್ ನ್ಯೂಸ್
– ಇಂದಿನಿಂದ ಮೂರು ದಿನ ಸಾಧಾರಣ ಮಳೆ
– ಮಳೆ ಬಾರದಿದ್ರೆ ಬಿಸಿಲು ತಡೆಯೋಕೆ ಆಗಲ್ಲ..!
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್ 22 ರಿಂದ 24ರ ವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ಮಾರ್ಚ್ 22ರಂದು ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಶಿವಮೊಗ್ಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಏರಿಳಿತವಾಗಲಿದೆ. ಬಿಸಿಲು ಹೆಚ್ಚಾದ ಕಡೆಗಳಲ್ಲಿ ಮಳೆ ಬೀಳುವ ಸಂಭವ ಇದೆ ಎಂದು ಹೇಳಲಾಗಿದೆ.
ಭಾರೀ ಬಿಸಿಲು: ಜನರು ಹೈರಾಣ
ಕಳೆದ 15 ದಿನಗಳಿಂದ ರಾಜ್ಯದಲ್ಲಿ ಭಾರೀ ಬಿಸಿಲು ಜನರನ್ನು ಕಂಗೆಡಿಸಿದೆ. ಮನೆಯಿಂದ ಹೊರ ಬರಲು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ತಂಪು ಪಾನೀಯಗಳಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಮಲೆನಾಡು ಭಾಗದಲ್ಲಿ ಮಳೆ
ಮಲೆನಾಡಿನ ಹಲವು ಕಡೆ ಮತ್ತೆ ಮಳೆ ದರ್ಶನ ನೀಡಿದೆ. ಕಳೆದ ವಾರ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಕಣ್ಮರೆಯಾಗಿದ್ದ ಮಳೆ, ಈ ವಾರಾಂತ್ಯದಲ್ಲಿ ಮತ್ತೆ ಮಲೆನಾಡಿನ ಹಲವು ಕಡೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆ ಆರಂಭವಾಗಿದೆ. ಗುರುವಾರ ಮಧ್ಯಾಹ್ನದಿಂದ ತೀರ್ಥಹಳ್ಳಿಯಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಮಳೆಯ ನಿರೀಕ್ಷೆಯಲ್ಲಿ ಜನರು ಆಕಾಶದತ್ತ ಮುಖ ಮಾಡಿದ್ದಾರೆ. ಗರಿಷ್ಠ ತಾಪಮಾನ ಏರಿಕೆಯಾಗುತ್ತಿದ್ದಂತೆ ಮಲೆನಾಡಿನ ಶೃಂಗೇರಿ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಇಂದು ತೀರ್ಥಹಳ್ಳಿಯಲ್ಲಿ ಸಾಧಾರಣ ಮಳೆ ಬರುವ ಸಾಧ್ಯತೆ ಹೆಚ್ಚಿದೆ.