ಲೋಕ ಸಭಾ ಚುನಾವಣಾ ಸಮರಕ್ಕೆ ಸಜ್ಜು!
– ಈ ತಿಂಗಳೇ ಅಧಿಸೂಚನೆ ಪ್ರಕಟ ಸಾಧ್ಯತೆ
– ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿದ್ಧತೆಗೆ ಸೂಚನೆ
– ಏನೇನು ನಿಯಮ… ಏನೇನು ಸಿದ್ಧತೆ…?
NAMMUR EXPRESS NEWS
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲು ಕೇಂದ್ರ ಚುನಾವಣೆ ಆಯೋಗ ಸೂಚನೆ ನೀಡಿದೆ. ಲೋಕ ಸಭಾ ಯಾವುದೇ ಲೋಪವಾಗದಂತೆ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲಾ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಚುನಾವಣೆ ಕರ್ತವ್ಯವನ್ನು ನಿಷ್ಪಕ್ಷ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಹಿನ್ನೆಲೆಯಲ್ಲಿ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ.
ಜಿಲ್ಲಾಡಳಿತ ಏನೇನ್ ಮಾಡಬೇಕು?
ಚುನಾವಣೆ ಘೋಷಣೆಯಾದ ತಕ್ಷಣ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ- ಕಾಲೇಜುಗಳ ಗೋಡೆಯ ಮೇಲಿನ ಬರಹ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿರುವ ರಾಜಕೀಯ ಪಕ್ಷಗಳ ಬ್ಯಾನರ್, ಪ್ಲೆಕ್ಸ್, ಹೋರ್ಡಿಂಗಳನ್ನು ತೆರವುಗೊಳಿಸಬೇಕು. ವಿವಿಧ ಇಲಾಖೆಗಳ ವೆಬ್ಸೈಟ್ ಹಾಗೂ ಸಾಮಾಜಿಕ ತಾಣಗಳಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳ ಭಾವಚಿತ್ರ ತೆರವುಗೊಳಿಸಲು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಆಯಾ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚುನಾವಣೆ ಕುರಿತು ಅರಿವು ಮೂಡಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಿ, ಮತದಾರರು ಹೆಚ್ಚಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕ್ರಮ ವಹಿಸಬೇಕು.
ಜಾಗೃತಿ ಮೂಡಿಸಲು ಹಂಚಿಕೆ ಮಾಡಲಾದ ಇ.ವಿ.ಎಂ ಮೆಷಿನ್ ಗಳನ್ನು ಹಿಂಪಡೆಯಬೇಕು. ಗುರುತಿಸಲಾಗಿರುವ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ವಿಕಲಚೇತನರು, ಅಶಕ್ತರು ಪ್ರವೇಶಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಮತದಾನ ಕೇಂದ್ರಗಳಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಅಗತ್ಯವಿದ್ದಲ್ಲಿ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಎಲ್ಲಾ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಧಿಕಾರಿಗಳು ಏನೇನ್ ಮಾಡಬೇಕು?
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದರೆ ಎಂಸಿಎಂಸಿ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಸಹಾಯಕ ವೆಚ್ಚ ವೀಕ್ಷಕರು, ಫೈಯಿಂಗ್ ಸ್ವಾಡ್ಗಳು, ವೀಡಿಯೋ ಸರ್ವೆಲನ್ಸ್ ವೀಡಿಯೋ ವಿಲ್ಡಿಂಗ್ ತಂಡಗಳು, ಸ್ಟ್ರಾಟಿಕ್ ಸರ್ವೆಲನ್ಸ್ ತಂಡಗಳು ಜಾಗೃತರಾಗಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು.
ಸಹಾಯಕ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ತಂಡಗಳ ಅಧಿಕಾರಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳಿಗೆ ನಿಗದಿಯಾಗುವ ಚುನಾವಣಾ ವೆಚ್ಚದ ಕುರಿತು ಸರಿಯಾದ ಲೆಕ್ಕಪತ್ರಗಳು ಇರಬೇಕು. ಈ ಸಂಬಂಧ ಯಾವುದೇ ಗೊಂದಲಕ್ಕೆ ಒಳಗಾಗದೇ ಎಲ್ಲ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು.
ಆಂತರಿಕ ಪ್ರದೇಶಗಳಲ್ಲಿ ಗಾಂಜಾ ಹಾಗೂ ಕಳ್ಳಭಟ್ಟಿ ಸಾಗಾಟ ಸೇರಿದಂತೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಅರಣ್ಯ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಬಂದರುಗಳಿಗೆ ಆಗಮಿಸುವ ಬೋಟುಗಳ ತಪಾಸಣೆಯನ್ನು ಸಹ ಕರಾವಳಿ ಕಾವಲು ಪೊಲೀಸ್ ಅಧಿಕಾರಿಗಳು ನಡೆಸಬೇಕು.ಚೆಕ್ಪೋಸ್ಟ್ ಸ್ಥಾಪನೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಈಗಲೇ ಕಾರ್ಯಪ್ರವೃತ್ತವಾಗಬೇಕು ಹಾಗೂ ಅಗತ್ಯ ಸಿದ್ಧತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.ಚುನಾವಣಾ ಘೋಷಣೆ ನಂತರ ಯಾವುದೇ ಹೊಸದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಟೆಂಡರ್ ಪ್ರಕಟಣೆಯನ್ನು ಹೊರಡಿಸಬಾರದು. ಈಗಾಗಲೇ ಚುನಾವಣೆ ಘೋಷಣೆ ಪೂರ್ವದಲ್ಲಿ ಕಾರ್ಯಾದೇಶ ನೀಡಿ, ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂಬ ಸೂಚನೆ ನೀಡಲಾಗಿದೆ. ಪೊಲೀಸ್, ಜಿಲ್ಲಾಡಳಿತ, ಚುನಾವಣೆ ವಿಭಾಗ ಈಗ ಅಲರ್ಟ್ ಆಗಿದೆ.
ವಿಶೇಷ ವರದಿ: ಅಮರ್ ಬಾಗಲಕೋಟೆ