ಫೆ.16ಕ್ಕೆ ರಾಜ್ಯ ಬಜೆಟ್: ಜನರಿಗೆ ಏನೇನ್ ಸಿಗುತ್ತೆ?
– ಫೆ.12ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ
-10 ದಿನಗಳ ಕಾಲ ಬಜೆಟ್ ಅಧಿವೇಶನ: ಭಾಷಣಕ್ಕೆ ಸೀಮಿತ ಆಗುತ್ತಾ ಅಧಿವೇಶನ?
– ಸರಿಯಾದ ಸಮಯಕ್ಕೆ ಬರಬೇಕು ಎಂದು ವಾರ್ನಿಂಗ್
NAMMUR EXPRESS NEWS
ಬೆಂಗಳೂರು: 16ನೇ ವಿಧಾನಸಭೆಯ 3ನೇ ಅಧಿವೇಶನವು ಫೆ.12ರಿಂದ 23ರವರೆಗೆ ನಡೆಯಲಿದೆ. ಫೆ.12 ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ.16ರಂದು ಮುಖ್ಯಮಂತ್ರಿಯವರು 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಒಟ್ಟು 10 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ. ಈ ಹಿಂದಿನ ಅಧಿವೇಶನ ಮುಕ್ತಾಯವಾದ ನಂತರ ಇಲ್ಲಿಯವರೆಗೆ ನಿಧನ ಹೊಂದಿರುವ ಗಣ್ಯವ್ಯಕ್ತಿಗಳಿಗೆ ಸದನದಲ್ಲಿ ಸಂತಾಪ ಸೂಚಿಸಲಾಗುತ್ತದೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ರಾಜ್ಯಪಾಲರ ಭಾಷಣದ ನಂತರ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆದು ಅಂಗೀಕಾರವಾಗಲಿದೆ ಎಂದು ತಿಳಿಸಿದರು.
ಫೆ.16ರಂದು ಮುಖ್ಯಮಂತ್ರಿಯವರು 2024-25ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಅಧಿವೇಶನದಲ್ಲಿ ಒಟ್ಟು 8 ದಿನಗಳ ಕಾಲ ಕಲಾಪ ನಿಗದಿಪಡಿಸಲಾಗಿದೆ. ಇದರ ಜತೆಗೆ ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರ ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ಫೆ. 9ರಂದು ಶಾಸಕರಿಗೆ ಬಜೆಟ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಶಾಸಕರು ಬಜೆಟ್ನಲ್ಲಿ ಹೇಗೆ ಭಾಗವಹಿಸಬೇಕು ಎಂದು ಮಾಹಿತಿ ನೀಡಲು IIMನಲ್ಲಿ ತರಬೇತಿ ಶಿಬಿರ ಏರ್ಪಡಿಸಿದ್ದೇವೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತರಬೇತಿ ನಡೆಯಲಿದೆ ಎಂದು ತಿಳಿಸಿದರು.
ಶಾಸಕರು ಸರಿಯಾದ ಸಮಯಕ್ಕೆ ಬರುವಂತೆ ಮಾಡಲು ಬೆಳಗ್ಗೆ 9 ಗಂಟೆಗೆ ಉಚಿತ ತಿಂಡಿ ವ್ಯವಸ್ಥೆ ಮಾಡುತ್ತಿದ್ದೇವೆ. ಒಂದೊಂದು ದಿನ ಒಂದೊಂದು ಹೋಟೆಲ್ನಿಂದ ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಶಾಸಕರು ರೆಡಿಯಾಗಿ ಬಂದು ಇಲ್ಲೇ ತಿಂಡಿ ಸೇವಿಸಿ ಸದನಕ್ಕೆ ಬರಬಹುದು ಎಂದು ಹೇಳಿದರು. ಹರಕೆ ಕೋಲದಲ್ಲಿ ಭಾಗಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳಲ್ಲ, ಪ್ರಶ್ನೆ ಕೇಳುವವರನ್ನು ಇತಿಹಾಸ ನೆನಪಿಗೆ ಇಟ್ಟುಕೊಳ್ಳಲ್ಲ. ಯಾರು ಕೆಲಸ ಮಾಡುತ್ತಾರೆ, ಯಾರು ಉತ್ತರ ಕೊಡುತ್ತಾರೆ ಅವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತೆ. ನಮ್ಮ ಪ್ರಾಚೀನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ದರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹೀಗಾಗಿ ನಾನೂ ಹೋಗಿದ್ದೆ. ಯಾರೋ ಒಬ್ಬ ಗೀಚಿದ್ರೆ, ನೂರು ಜನ ಒಪ್ಪಿಕೊಳ್ಳಲ್ಲ. ಅದಕ್ಕೆಲ್ಲ ನಾವು ಪ್ರಾಮುಖ್ಯತೆ ಕೊಡಬಾರದು ಎಂದು ಹೇಳಿದರು.