ಗ್ರಾ.ಪಂ ಸದಸ್ಯರಿಗೆ ಕೈಕೊಟ್ಟ ಸರ್ಕಾರ!
– ಬರೋಬ್ಬರಿ 7 ತಿಂಗಳಿನಿಂದ ಸಿಗದ ಗೌರವಧನ
– ಕುಟುಂಬ ನಿರ್ವಹಣೆಗೆ ಅನೇಕ ಸದಸ್ಯರ ಪರದಾಟ
ವಿಶೇಷ ವರದಿ: ರಂಜಿತ್ ಕೋಲಾರ
NAMMUR EXPRESS NEWS
ಬೆಂಗಳೂರು: ಬರೋಬ್ಬರಿ 7 ತಿಂಗಳಿಂದ ಗೌರವಧನವಿಲ್ಲದೆ ಗ್ರಾ.ಪಂ ಸದಸ್ಯರಿಗೆ ದಿಕ್ಕು ತೋಚದಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ 7 ತಿಂಗಳಿನಿಂದ ಗೌರವಧನ ವಿಳಂಬವಾಗುತ್ತಿದ್ದು, ಸಕಾಲಕ್ಕೆ ಸಂಬಳ ಸಿಗಬೇಕೆಂಬ ಗ್ರಾ.ಪಂ ಸದಸ್ಯರ ಹಕ್ಕೊತ್ತಾಯಕ್ಕೆ ನೂತನ ಸರಕಾರ ನೀರೆರೆಯಬೇಕಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರಿಗೆ ಅವರ ಸೇವೆಗಾಗಿ ಗೌರವ ಧನ ನೀಡಲಾಗುತ್ತದೆ. ಅಧ್ಯಕ್ಷರಿಗೆ 6000 ರೂ. ಉಪಾಧ್ಯಕ್ಷರಿಗೆ 4000 ರೂ.ಹಾಗೂ ಸದಸ್ಯರಿಗೆ 2000 ರೂ. ತಿಂಗಳಿಗೆ ನೀಡಲಾಗುತ್ತಿದೆ. ಆದರೆ ಜುಲೈ ಬಳಿಕ ಸಂಬಳ ಬಂದಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ರಾಜ್ಯದ 6020 ಗ್ರಾಮ ಪಂಚಾಯತ್ ಸದಸ್ಯರಿಗೆ ಸಂಬಳ ಇಲ್ಲದೆ ಜನರ ಬಳಿಗೆ ಹೋಗಲು ಕಷ್ಟವಾಗಿದೆ.
ಕುಟುಂಬ ನಿರ್ವಹಣೆ ಕಷ್ಟ:
ಸಕಾಲಕ್ಕೆ ಗೌರವಧನ ಸಿಗದ ಕಾರಣ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರಾಗಿರುವ ಸದಸ್ಯರಿಗೆ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಜನರ ಕೆಲಸಕ್ಕಾಗಿ ಮನೆ ಮನೆ ಓಡಾಡಬೇಕಿದೆ. ಆದರೆ ಪೆಟ್ರೋಲ್ ಖರ್ಚಿಗೂ ಹಣ ಇಲ್ಲದಾಗಿದೆ. ಸಾವಿರಾರು ಸದಸ್ಯರ ನಾನಾ ಕುಟುಂಬಗಳು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿವೆ. ಶಾಲೆಗಳಿಗೆ ಹೋಗುವ ಮಕ್ಕಳ ಶುಲ್ಕ, ಸಮವಸ್ತ್ರ ಮೊದಲಾದ ಖರ್ಚುಗಳಿಗೆ ಹಣಭರಿಸುವುದು ಕಷ್ಟವಾಗಿದೆ. ಸರಕಾರಿ ಶಾಲೆಗೆ ಕಳುಹಿಸುತ್ತಿದ್ದರೂ ನೋಟ್ ಪುಸ್ತಕ, ಬ್ಯಾಗ್ ಸೇರಿದಂತೆ ಪೂರೈಸಲೇಬೇಕಿರುವ ಮಕ್ಕಳ ಬೇಡಿಕೆ ಈಡೇರಿಕೆ ಕಷ್ಟವಾಗಿದೆ. ಗ್ರಾಮ ಪಂಚಾಯತ್ ಸದಸ್ಯರ ಹಿತವನ್ನು ಸರಕಾರ ಕಾಯಬೇಕು, ಪ್ರತಿ ತಿಂಗಳು ಗೌರವಧನ ಸಿಗಬೇಕು ಎಂದು ಗ್ರಾಪಂ ಸದಸ್ಯರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಹೋರಾಟಕ್ಕೂ ಸಿದ್ಧವಾಗಿದ್ದಾರೆ.
ಕೆಲವು ಕಡೆ ಸ್ಥಳೀಯ ಗ್ರಾಮಪಂಚಾಯಿತಿ ನಿಧಿಯಿಂದ ಹಣ
ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ನಿಧಿಯಿಂದ ಸಂಬಳ ಹಾಕಿದ್ದಾರೆ. ಸರ್ಕಾರ ಜಿಲ್ಲಾ ಪಂಚಾಯತ್ ಮೂಲಕ ತಾಲೂಕು ಪಂಚಾಯತ್ ಬಳಿಕ ಗ್ರಾಮ ಪಂಚಾಯತ್ ಅಕೌಂಟಟಿಗೆ ಹಣ ಹಾಕಿ ಸಂಬಳ ಕೊಡಬೇಕಿದೆ.