ಅಯ್ಯೋ ಬಿಯರ್ ಭಾರ!
– ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ!
– 3ನೇ ಬಾರಿಗೆ ಬಿಯರ್ ದರ ಏರಿಕೆ
– ಬಾಟಲ್ಗೆ 5 ರಿಂದ 12 ರೂ.ವರೆಗೆ ಹೆಚ್ಚಳ
NAMMUR EXPRESS NEWS
ಬೆಂಗಳೂರು: ಬಿಯರ್ ದರ ಫೆಬ್ರವರಿ 1 ರಿಂದ ಪ್ರತಿ ಬಾಟಲ್ಗೆ 5 ರೂಪಾಯಿಗಳಿಂದ 12 ರೂಪಾಯಿವರೆಗೂ ಹೆಚ್ಚಳವಾಗಲಿದೆ. ಸರ್ಕಾರ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.185 ರಿಂದ 195 ಕ್ಕೆ ಹೆಚ್ಚಳ ಮಾಡಿರುವುದರಿಂದ ಬಿಯರ್ ಬೆಲೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಅಬಕಾರಿ ಇಲಾಖೆ ಮೊದಲಿಗೆ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಬಳಿಕ ಸಲ್ಲಿಕೆಯಾದ ಆಕ್ಷೇಪಣೆ ಪರಿಗಣಿಸಿ ಇದೀಗ ಸುಂಕ ಏರಿಕೆಯ ಕುರಿತು ಬುಧವಾರ ಅಂತಿಮ ಆದೇಶ ಹೊರಡಿಸಿದೆ. ಅದರಂತೆ ಬಿಯರ್ ದರ ಹೆಚ್ಚಳವಾಗಲಿದೆ. ಬ್ರಾಂಡ್ ಆಧಾರದ ಮೇಲೆ ದರ ಏರಿಕೆ: ಬ್ರಾಂಡ್ಗಳ ಆಧಾರದ ಮೇಲೆ ದರ ಏರಿಕೆಯಾಗಲಿದೆ.
ಸಾಮಾನ್ಯ ಬ್ರಾಂಡ್ಗಳಿಂದ ಪ್ರೀಮಿಯಂ ಬ್ರಾಂಡ್ಗಳವರೆಗೆ ಎಲ್ಲಾ ಬಗೆಯ ಬಿಯರ್ ದರ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಬಿಯರ್ ದರ ಹೆಚ್ಚಳವಾಗುತ್ತಿರುವುದು ಕಳೆದ ಏಳು ತಿಂಗಳಲ್ಲಿ ಇದು ಮೂರನೇ ಬಾರಿ. 6 ತಿಂಗಳಲ್ಲಿ 40 ರೂಪಾಯಿ ಹೆಚ್ಚಳ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರಕಾರ ಬಿಯರ್ ಮೇಲೆ ಶೇ.20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಅದರಿಂದ ದರ ಏರಿಕೆಯಾಗಿತ್ತು. ಆ ನಂತರ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು. ಅದರ ಬೆನ್ನಲ್ಲೇ ಇದೀಗ ಮತ್ತೆ ಬಿಯರ್ ದರ ಹೆಚ್ಚಳವಾಗಿದೆ. ಹಾಗಾಗಿ, ಆರೇಳು ತಿಂಗಳ ಅವಧಿಯಲ್ಲಿ ಬಿಯರ್ ಬೆಲೆ ಸುಮಾರು 40 ರೂ. ವರೆಗೆ ಹೆಚ್ಚಳವಾದಂತಾಗಿದೆ ಎನ್ನುತ್ತಾರೆ ಮದ್ಯ ಮಾರಾಟಗಾರರು.