ಬೆಂಗಳೂರು ಟಾಪ್ 5 ನ್ಯೂಸ್..!
– ಬೆಂಗಳೂರು: ಕರುವಿನ ಮೇಲೆ ಕಾರು ಹತ್ತಿಸಿ ಪ್ರಾಣ ತೆಗೆದ ಪಾಪಿ.!
– ಗುದನಾಳಕ್ಕೆ ಪೈಪ್ನಿಂದ ಗಾಳಿ ಬಿಟ್ಟ ಸ್ನೇಹಿತ: ಯುವಕ ಸಾವು!
– ಬಸ್ ನಲ್ಲಿ ಕುಳಿತಾಗ ಹೃದಯಾಘಾತ: ಹಾರಿಹೋಯ್ತು ವೃದ್ಧನ ಪ್ರಾಣಪಕ್ಷಿ!
– ರಾಜಕಾಲುವೆ ಬಳಿ ಶುಚಿರಹಿತ ಫಲೂಡಾ ತಯಾರಿಕೆ: ನೋಟಿಸ್
– ಬಿಬಿಎಂಪಿ: ಇಬ್ಬರು ಮಾರ್ಷಲ್ಗಳ ವಜಾ..!
NAMMUR EXPRESS NEWS
ಬೆಂಗಳೂರು: ರಸ್ತೆಯಲ್ಲಿ ಕರು ಮಲಗಿರುವುದನ್ನು ಕಂಡರೂ ಸಹ ಕಾರು ಚಾಲಕನೊಬ್ಬ ಮೂಕ ಪ್ರಾಣಿಯ ಮೇಲೆ ಕಾರು ಹತ್ತಿಸಿಕೊಂಡ ಹೋದ ಅಮಾನವೀಯ ಘಟನೆ ನಡೆದಿದೆ. ಕಳೆದ ತಿಂಗಳು 25 ರಂದು ನಡೆದಿರುವ ಘಟನೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕರು ಚಕ್ರದಡಿ ಸಿಲುಕಿದ್ರೂ ಸಹ ಕರುಣೆ ತೋರದೆ ಕಾರು ಚಾಲಕ ಕ್ರೌರ್ಯ ಮೆರೆದಿದ್ದಾನೆ.
ಬೆಂಗಳೂರು: ಗುದನಾಳಕ್ಕೆ ಏರ್ ಪ್ರೆಶರ್ ಪೈಪ್ನಿಂದ ಗಾಳಿ ಬಿಟ್ಟ ಸ್ನೇಹಿತ:
ಕರುಳು ಛಿದ್ರವಾಗಿ ಯುವಕ ಸಾವು!:
ಬೆಂಗಳೂರು: ತಮಾಷೆಗಾಗಿ ಸ್ನೇಹಿತನ ಗುದದ್ವಾರಕ್ಕೆ ಏರ್ ಪ್ರೆಶರ್ ಪೈಪ್ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ಹೊಟ್ಟೆಯೊಳಗಿನ ಕರುಳು ಛಿದ್ರವಾಗಿ ಯುವಕ ಮೃತಪಟ್ಟಿರುವ ಘಟನೆ ಇಲ್ಲಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಾ.25ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯೋಗೇಶ್ (24) ಎಂಬಾತ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದ್ದು, ಆರೋಪಿ ಮುರುಳಿ ಎಂಬವನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಸ್ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ:
ಬೆಂಗಳೂರು: ಹೃದಯಾಘಾತ ವೃದ್ಧರೊಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಈಗೀಗ ಹೃದಯಾಘಾತ ಯಾವುದೇ ಕ್ಷಣದಲ್ಲಿ ಆಗಿಬಿಡಬಹುದು ಎನ್ನುವಷ್ಟು ಭಯಾನಕವಾಗಿದೆ. ಕುಳಿತಲ್ಲೇ, ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ, ನಿಂತಲ್ಲೇ ಉಸಿರು ನಿಲ್ಲುವ, ಮಲಗಿದ್ದಲ್ಲೇ ಉಸಿರು ಚೆಲ್ಲುವ ವಿದ್ಯಮಾನಗಳು ಏಕಾಏಕಿ ಹೆಚ್ಚಾಗಿದೆ. ಇಂಥಹುದೇ ಒಂದು ಆತಂಕ ಮೂಡಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ದರೊಬ್ಬರು ಕುಳಿತಲ್ಲೇ ಕುಸಿದಿದ್ದು, ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಠಾತ್ ಹೃದಯಾಘಾತದಿಂದ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ.
ಕೃಷ್ಣ (60) ಮೃತ ದುರ್ದೈವಿ. 11 ಗಂಟೆ ಸುಮಾರಿಗೆ ಮೆಜೆಸ್ಟಿಕ್ ನಿಲ್ದಾಣದಿಂದ ಬಸ್ ಹತ್ತಿದ್ದ ಕೃಷ್ಣ ಅವರು ಟಿಕೆಟ್ ಪಡೆದು ಸೀಟ್ನಲ್ಲಿ ಕುಳಿತುಕೊಂಡಿದ್ದರು. ನವರಂಗ್ ಬಳಿ ಬರುತ್ತಿದ್ದಂತೆ ಹದಿನೈದು ನಿಮಿಷದಲ್ಲೇ ಹೃದಯಾಘಾತವಾಗಿದೆ. ನೋಡನೋಡುತ್ತಿದ್ದಂತೆ ಬಸ್ಸಿನಲ್ಲೇ ಉಸಿರು ಚೆಲ್ಲಿದ್ದಾರೆ.
ಬೆಂಗಳೂರು:ರಾಜಕಾಲುವೆ ಬಳಿ ಶುಚಿರಹಿತ ಫಲೂಡಾ ತಯಾರಿಕೆ: ನೋಟಿಸ್:
ಬೆಂಗಳೂರು: ಶೇಷಾದ್ರಿಪುರ ರಾಜಕಾಲುವೆಯ ಪಕ್ಕದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವೊಂದರಲ್ಲಿ ಫಲೂಡಾ, ಐಸ್ ಕ್ರೀಂ, ಬಾದಾಮ್ ಹಾಲು ಉತ್ಪಾದನೆ ಘಟಕ ನಡೆಸಲಾಗುತ್ತಿದೆ’ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಭಾರತ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿವಿಎಂಪಿ) ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಹೈಕೋರ್ಟ್ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ಬಿಬಿಎಂಪಿ: ಇಬ್ಬರು ಮಾರ್ಷಲ್ಗಳ ವಜಾ!
ಬೆಂಗಳೂರು: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯ ಪಾದಚಾರಿ ಮಾರ್ಗದಲ್ಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ ಹಿರಿಯ ನಾಗರಿಕರೊಬ್ಬರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದ ಇಬ್ಬರು ಮಾರ್ಪಲ್ಗಳನ್ನು ಕೆಲಸದಿಂದ ಬಿಬಿಎಂಪಿ ವಜಾಗೊಳಿಸಿದೆ. ಬ್ಯಾಗ್ ಮಾರುತ್ತಿದ್ದ ಹಿರಿಯ ನಾಗರಿಕರಿಂದ ಬ್ಯಾಗ್ ಕಸಿದು, ಎಳೆದಾಡಿದ್ದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಮಾರ್ಷಲ್ಗಳ ಮೇಲೆ ಆಕ್ರೋಶ ವ್ಯಕ್ತವಾಗತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಮಾರ್ಷಲ್ಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.