– ಬೆಂಗಳೂರಿನಲ್ಲಿ ಹಿಟ್ ಆ್ಯಂಡ್ ರನ್ ಮಹಿಳೆ ಬಲಿ
– ಬೆಂಗಳೂರು : ಗಾಡಿ ಟಚ್ ಆಗಿದ್ದಕ್ಕೆ ಪ್ಯಾಂಟ್ ಬಿಚ್ಚಿದ ಕ್ಯಾಬ್ ಚಾಲಕ
– ಕೊಡಗು : ಕೊಡಗಿನಲ್ಲಿ ಅರಣ್ಯ ಸಿಬ್ಬಂದಿಯ ಅಟ್ಟಾಡಿಸಿದ ಒಂಟಿ ಸಲಗ
– ಮೈಸೂರು: ಮಿನಿ ಬಸ್ಗೆ ಟ್ಯಾಂಕರ್ ಡಿಕ್ಕಿ
– ಹಾಸನ : ಹಾಸನದಲ್ಲಿ ಹೋಬಳಿ ಕೇಂದ್ರಕ್ಕೆ ನುಗ್ಗಿದ ಆನೆ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಹಿಟ್ ಆ್ಯಂಡ್ ರನ್ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು 62 ವರ್ಷದ ಆಶಾರಾಣಿ ಎಂಬವರು ಮೃತಪಟ್ಟಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ. ಆಶಾರಾಣಿ ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ನಿವಾಸಿಯಾಗಿದ್ದು, ಅವರು ಶ್ರೀರಂಗಪಟ್ಟಣಕ್ಕೆ ಹೋಗಲು ಬೆಳಗಿನ ಜಾವ 5:40ರ ಸುಮಾರಿಗೆ ಮನೆ ಬಿಟ್ಟು ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಯಾವುದೋ ವಾಹನ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಬೆಳಕು ಕಡಿಮೆ ಇದ್ದ ಕಾರಣ ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದು ಪತ್ತೆಯಾಗಿಲ್ಲ. ಇದೀಗ ಪೊಲೀಸರು ಆ ಭಾಗದಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಹಿಟ್ ಆ್ಯಂಡ್ ರನ್ ಮಾಡಿ ಹೋದ ವಾಹನವನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಕೆಲವು ಸಮಯದಿಂದ ಹಿಟ್ ಆ್ಯಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾತ್ರಿಯ ಹೊತ್ತು ಮತ್ತು ಮುಂಜಾನೆ ವಾಹನಗಳು ಅತಿವೇಗವಾಗಿ ಮತ್ತು ವಿವೇಚನೆ ಇಲ್ಲದೆ ಸಾಗಿ ಜೀವವನ್ನು ಬಲಿ ಪಡೆಯುತ್ತಿವೆ.
ಬೆಂಗಳೂರು : ಗಾಡಿ ಟಚ್ ಆಗಿದ್ದಕ್ಕೆ ಪ್ಯಾಂಟ್ ಬಿಚ್ಚಿದ ಕ್ಯಾಬ್ ಚಾಲಕ
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ರೋಡ್ ರೇಜ್ ಪ್ರಕರಣವು ಮುಂದುವರಿದಿದೆ. ಕಾರಿನ ಗಾಡಿ ಟಚ್ ಆಗಿದ್ದಕ್ಕೆ ಸಿಟ್ಟಾದ ಕ್ಯಾಬ್ ಚಾಲಕನೊಬ್ಬ ಗಲಾಟೆ ಮಾಡಿದ್ದಾನೆ. ಒಂದು ಹೆಜ್ಜೆ ಮುಂದೆ ಹೋದ ಕ್ಯಾಬ್ ಚಾಲಕ ಗಲಾಟೆಯಲ್ಲಿ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಫೆ.9ರ ರಾತ್ರಿ ಘಟನೆ ನಡೆದಿದೆ. ಫ್ಲೈಓವರ್ನಲ್ಲಿ ಹೋಗುವಾಗ ಕ್ಯಾಬ್ಗೆ ಮತ್ತೊಂದು ಕಾರು ಟಚ್ ಆಗಿತ್ತು. ಇದರಿಂದ ಸಿಟ್ಟಿಗೆದ್ದು ಚಾಲಕ ಹಾಗೂ ಸವಾರನ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಈ ಸಿಟ್ಟಿಗೆದ್ದ ಕ್ಯಾಬ್ ಚಾಲಕ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಚಾಲಕನ ವಿಕೃತಿಗೆ ಗಲಾಟೆ ಮತ್ತಷ್ಟು ಹೆಚ್ಚಾಗಿದೆ.
ಕ್ಯಾಬ್ ಚಾಲಕನ ವರ್ತನೆಗೆ ಇತರೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಕಾರಲ್ಲಿ ಮಹಿಳೆಯರು ಮಕ್ಕಳು ಇದ್ದರೂ, ಅವರ ಮುಂದೆ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕಿಡಿಕಾರಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದು, ಕ್ಯಾಬ್ ಚಾಲಕನ ವರ್ತನೆಗೆ ನೆಟ್ಟಿಗೆರು ಕಿಡಿಕಾರಿದ್ದಾರೆ. ಈ ರೀತಿ ಅಸಹ್ಯ ವರ್ತನೆಯು ಮುಜುಗರವನ್ನುಂಟು ಮಾಡುತ್ತಿದೆ. ರಸ್ತೆಯಲ್ಲಿ ಓಡಾಡುವವರಿಗೆ, ಸವಾರರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಕೊಡಗಿನಲ್ಲಿ ಅರಣ್ಯ ಸಿಬ್ಬಂದಿಯ ಅಟ್ಟಾಡಿಸಿದ ಒಂಟಿ ಸಲಗ
ಕೊಡಗು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷವು ಮುಂದುವರಿದಿದೆ. ಆಹಾರವನ್ನು ಅರಸಿ ಬರುವ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಸದ್ಯ ಕೊಡಗಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಕಾಜೂರು ಅರಣ್ಯ ಪ್ರದೇಶದಿಂದ ಬಂದ ಮದವೇರಿದ ಕಾಡಾನೆಯು ದಾಳಿ ಮಾಡಿದೆ. ಪ್ರಾಣಪಾಯದಿಂದ ಆರ್ಆರ್ಟಿ ಸಿಬ್ಬಂದಿ , ಅರಣ್ಯ ರಕ್ಷಕ ಪಾರಾಗಿದ್ದಾರೆ. ಬೆಳಗ್ಗೆ ಕಾಡಾನೆಯು ಕೋವರ್ ಕೊಲ್ಲಿ ಟಾಟಾ ಎಸ್ಟೇಟ್ನಲ್ಲಿತ್ತು. ಈ ಮಾಹಿತಿ ತಿಳಿದು ಸ್ಥಳಕ್ಕೆ ಆರ್ಆರ್ಟಿ ಮತ್ತು ಅರಣ್ಯ ಸಿಬ್ಬಂದಿ ತೆರಳಿದ್ದರು. ಈ ವೇಳೆ ಸಿಬ್ಬಂದಿಯನ್ನು ಕಂಡು ಆನೆಯು ದಾಳಿ ಮಾಡಿ, ಬೈಕ್ ಜಖಂಗೊಳಿಸಿದೆ. ನಂತರ ಎಸ್ಟೇಟ್ನಿಂದ ಅರಣ್ಯಕ್ಕೆ ವಾಪಸ್ ತೆರಳಿದೆ. ಅದೃಷ್ಟವಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ ಮದವೇರಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಕಾಡಾನೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.
ಮಿನಿ ಬಸ್ಗೆ ಟ್ಯಾಂಕರ್ ಡಿಕ್ಕಿ
ಮೈಸೂರು : ಖಾಸಗಿ ಶಾಲಾ ಬಸ್ಗೆ ಟ್ಯಾಂಕರ್ ವಾಹನವು ಡಿಕ್ಕಿ ಹೊಡೆದಿದೆ. ಪರಿಣಾಮ ಶಾಲಾ ಮಕ್ಕಳಿಂದ ಬಸ್ ಉರುಳಿ ಬಿದ್ದಿದೆ. ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಸಿಇಟಿ ಖಾಸಗಿ ಶಾಲೆಗೆ ಸೇರಿ ಮಿನಿ ಬಸ್ ಇದಾಗಿದೆ. ಮೈಸೂರಿನ ಸಾಲಿಗ್ರಾಮ- ಭೇರ್ಯ ಹೆದ್ದಾರಿಯಲ್ಲಿ ಬರುವ ಕುರುಬಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ. ಟ್ಯಾಂಕರ್ ವಾಹನವು ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿತ್ತು. ಕುರುಬಹಳ್ಳಿ ಗ್ರಾಮದಿಂದ ಇದೇ ಮಾರ್ಗವಾಗಿ ಶಾಲಾ ಮಕ್ಕಳಿದ್ದ ಮಿನಿ ಬಸ್ ಮಿರ್ಲೆ ಗ್ರಾಮಕ್ಕೆ ಹೋಗುತ್ತಿತ್ತು. ಕುರುಬಹಳ್ಳಿ ಗೇಟ್ ಬಳಿ ಏಕಾಏಕಿ ಶಾಲಾ ಮಕ್ಕಳಿರುವ ಮಿನಿ ಬಸ್ಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಯಲ್ಲಿ ಮಿನಿ ಬಸ್ ಉರುಳಿ ಬಿದ್ದಿದೆ. ಶಾಲೆ ಬಸ್ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಾಯಗೊಂಡ ಮಕ್ಕಳನ್ನು ರವಾನಿಸಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನದಲ್ಲಿ ಹೋಬಳಿ ಕೇಂದ್ರಕ್ಕೆ ನುಗ್ಗಿದ ಆನೆ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ಒಂಟಿ ಸಲಗವೊಂದು ಹೋಬಳಿ ಕೇಂದ್ರಕ್ಕೆ ನುಗ್ಗಿದೆ. ತಡರಾತ್ರಿ ಗ್ರಾಮದೊಳಗೆ ಬಂದ ಕಾಡಾನೆ ಕಂಡು ಬೈಕ್ನಲ್ಲಿ ಬರುತ್ತಿದ್ದ ಸವಾರರು ಎದ್ದು ಬಿದ್ದು ಓಡಿದ್ದಾರೆ. ಇತ್ತ ನೈಟ್ ಬೀಟ್ನಲ್ಲಿದ್ದ ಪೊಲೀಸರು ಒಂಟಿಸಲಗವನ್ನು ಕಂಡು ಠಾಣೆಯೊಳಗೆ ಓಡಿ ಹೋಗಿದ್ದಾರೆ. ಒಂಟಿ ಸಲಗವು ರಸ್ತೆ ಬದಿ ನಿಂತಿದ್ದ ವಾಹನಗಳನ್ನು ಬೀಳಿಸಿ ಹೋಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದೆ. ಯಸಳೂರು ಗ್ರಾಮದ ಸಮೀಪವಿರುವ ಕಾಫಿ ತೋಟದಲ್ಲಿ ಕಾಡಾನೆ ಬೀಡುಬಿಟ್ಟಿದೆ. ಕಾಡಾನೆ ಇರುವ ಬಗ್ಗೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ. ಜತೆಗೆ ವಾಹನ ಸವಾರರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಿದ್ದಾರೆ.