- ಆರ್.ಆರ್.ನಗರ ಮುನಿರತ್ನ ಮತ್ತೆ ಬಾಸ್
- ಮೊದಲ ಬಾರಿಗೆ ಶಿರಾದಲ್ಲಿ ಖಾತೆ ಓಪನ್
- ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಮುಖಭಂಗ
ಬೆಂಗಳೂರು: ರಾಜ್ಯದಲ್ಲಿ ನಡೆದ ಬೆಂಗಳೂರು ನಗರದ ಆರ್.ಆರ್.ನಗರ ಮತ್ತು ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಪ್ರತಿ ಪಕ್ಷಗಳ ಗೆಲುವಿನ ಆಸೆಗೆ ತಣ್ಣೀರು ಎರಚಿದೆ.
ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ಕುಸುಮಾ ಅವರಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನಿಂದ ಎರಡು ಬಾರಿ ಗೆಲುವು ಸಾಧಿಸಿದ್ದ ಮುನಿರತ್ನ ಅವರು ಈ ಬಾರಿ ಬಿಜೆಪಿ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಅವರು ಅಂತಿಮವಾಗಿ 57,672 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಬಿಜಿಪಿಯ ಮುನಿರತ್ನ ಅವರು ಒಟ್ಟು 1,25,665 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 67,993 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಖಾತೆ ಓಪನ್!: ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಇದೆ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ರಾಜೇಶ್ ಗೌಡ ಅವರು 72,739 ಮತಗಳನ್ನ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 60,321 ಮತ್ತು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 34,707 ವೋಟ್ಗಳನ್ನ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 12,418 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿ ಜೆಡಿಎಸ್-ಕಾಂಗ್ರೆಸ್ ತಿಕ್ಕಾಟ ಬಿಜೆಪಿಗೆ ಪ್ಲಸ್ ಆಗಿದೆ.
ಇಲ್ಲೂ ಬಿಜೆಪಿ: ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರ ಗೆಲುವು ಸಾಧಿಸಿದ್ದಾರೆ.
ಎಸ್ ವಿ ಸಂಕನೂರು 23,857 ಮತಗಳನ್ನು ಪಡೆದರೆ, ಸಮೀಪದ ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ.ಕುಬೆರಪ್ಪ 12,448, ಪಕ್ಷೇತರ ಅಭ್ಯರ್ಥಿ ಬಸವರಾಜ್ ಗುರಿಕಾರ್ 6,188 ಮತಗಳನ್ನು ಪಡೆದುಕೊಂಡಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು ಯಡಿಯೂರಪ್ಪ ಖುರ್ಚಿ ಭದ್ರವಾಗಿದೆ. ಜೊತೆಗೆ ಸಂಪುಟ ವಿಸ್ತರಣೆ ಹಾದಿ ಸುಗಮವಾಗಿದೆ.