- ಹತ್ತಾರು ಕಡೆ ಮನೆ: ಲಕ್ಷಾಂತರ ಹಣ
- ಎಸಿಬಿ ದಾಳಿಯಿಂದ ಮಹಿಳಾ ಅಧಿಕಾರಿಗೆ ಸಂಕಷ್ಟ
ಬೆಂಗಳೂರು: ಕೆಎಎಸ್ ಅಧಿಕಾರಿ, ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ಡಾ.ಬಿ.ಸುಧಾ ಅವರ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ.
ಭ್ರಷ್ಟಾಚಾರದ ಆರೋಪದಲ್ಲಿ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ, ಕಚೇರಿಗಳ ಮೇಲೆ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು, ಉಡುಪಿಯ ಹೆಬ್ರಿ, ಮೈಸೂರಿನಲ್ಲಿರುವ ಡಾ. ಸುಧಾ ಅವರ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಅವರ ಭವ್ಯ ಬಂಗಲೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ. ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು.
ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ ಮೇಲೆ ಶನಿವಾರ ಎಸಿಬಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿರುವ ಮನೆ ಮೇಲೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಮತ್ತು ತಂಡದಿಂದ ಡಾ. ಸುಧಾ ಅವರ ಮನೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಈ ಹಿಂದೆ ಸೊರಬದಲ್ಲಿ ತಹಸೀಲ್ದಾರ್ ಆಗಿದ್ದರು.