ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮೋಜು ಮಸ್ತಿಗೆ ಬ್ರೇಕ್!
* ಮೋಟಾರ್ ರ್ಯಾಲಿ ನಡೆಸಿದವರ ವಿರುದ್ಧ ಕೇಸ್?
* ಅರಣ್ಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಈಶ್ವರ್ ಖಂಡ್ರೆ
NAMMUR EXPRESS NEWS
ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಭೂ ಒತ್ತುವರಿ ತೆರವು ಬೆನ್ನಲ್ಲೇ ಇದೀಗ ಮೋಜು ಮಸ್ತಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಮೂಡಿಗೆರೆಯಲ್ಲಿ ನಡೆದ ಫೋರ್ ವ್ಹೀಲ್ ರ್ಯಾಲಿ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ.
ಈ ಬಗ್ಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವ ಸಚಿವ ಈಶ್ವರ್ ಖಂಡ್ರೆ, ಪಶ್ಚಿಮಘಟ್ಟ ಮತ್ತು ಅರಣ್ಯ ಮೋಜು, ಮಸ್ತಿಯ ತಾಣಗಳಲ್ಲ. ಈ ಪ್ರದೇಶದಲ್ಲಿ ನೂರಾರು ಪ್ರಭೇದದ ಖಗ, ಮೃಗ, ಕೀಟ, ಸಸ್ಯ ಸಂಕುಲ ಇರುತ್ತದೆ. ಇವುಗಳೆಲ್ಲದರ ಸಂರಕ್ಷಣೆಯ ಹೊಣೆ ಅರಣ್ಯ ಇಲಾಖೆಯ ಮೇಲಿದೆ. ಆದರೆ, ಆ. 31/2024ರಂದು ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಬೈರಾಪುರ ಹೊಸಕೆರೆಯ 9 ಗುಡ್ಡಗಳ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ಇರುವ ಕಾಡಿನೊಳಗೆ ಅಕ್ಮವಾಿ ಪ್ರವೇಶಿಸಿ, ಫೋರ್ ವೀಲ್ ಡ್ರೈವ್ ವಾಹನಗಳ ರ್ಯಾಲಿ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.
ಈ ರ್ಯಾಲಿ ಯಲ್ಲಿ ಸುಮಾರು 52 ವಾಹನಗಳು ಭಾಗಿಯಾಗಿದ್ದವು ಎಂಬ ಮಾಹಿತಿ ಇದ್ದು, ಈ ರ್ಯಾಲಿಯಿಂದ ಪರಿಸರದ ಹಾನಿಯ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ಪರಿಶೀಲನೆ ನಡೆಸಿ, ಅರಣ್ಯದೊಳಗೆ ರ್ಯಾಲಿ ನಡೆದಿದ್ದಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಲು ಮತ್ತು ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಸಾರ್ವಜನಿಕರ ನೆಮ್ಮದಿ ಭಂಗ ಪ್ರಕರಣ ದಾಖಲಿಸಲು ತುರ್ತು ಕ್ರಮ ವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ ಎಂದು ಅವರು ಸೂಚನೆ ಪತ್ರದ ಮೂಲಕ ತಿಳಿಸಿದ್ದಾರೆ.