ಶೃಂಗೇರಿಯಲ್ಲಿ ಎಬಿವಿಪಿ ಸ್ವಚ್ಛತಾ ಅಭಿಯಾನ!
– ಕಸ ಹಾಗೂ ಸ್ವಚ್ಛತೆ ಬಗ್ಗೆ ಜನ ಜಾಗೃತಿ
– ಎಬಿವಿಪಿ ಸಂಸ್ಥಾಪನಾ ದಿನ, ಶೃಂಗೇರಿಯ ವಿದ್ಯಾರ್ಥಿ ಪರಿಷತ್ನ ಹಿರಿಯ ಕಾರ್ಯಕರ್ತ ದಿ.ಅಭಿಷೇಕ್ ಅವರ ಸ್ಮರಣಾರ್ಥ ಕಾರ್ಯಕ್ರಮ
NAMMUR EXPRESS NEWS
ಶೃಂಗೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 76ನೇ ಸಂಸ್ಥಾಪನಾ ದಿನದ ಅಂಗವಾಗಿ ಹಾಗೂ ಶೃಂಗೇರಿಯ ವಿದ್ಯಾರ್ಥಿ ಪರಿಷತ್ನ ಹಿರಿಯ ಕಾರ್ಯಕರ್ತರಾದ ದಿ.ಅಭಿಷೇಕ್ ಅವರ ಸ್ಮರಣಾರ್ಥವಾಗಿ ಶೃಂಗೇರಿಯ ಶಾರದಾ ಧನ್ವಂತರಿ ಆಸ್ಪತ್ರೆ ಸರ್ಕಲ್ನ ಬಸ್ ನಿಲ್ದಾಣ ಸ್ವಚ್ಛತೆಯಿಲ್ಲದೇ ಕಸದ ರಾಶಿ ತುಂಬಿದ್ದ ಕಾರಣ ಸ್ವಚ್ಛತಾ ಅಭಿಯಾನವನ್ನು ಶೃಂಗೇರಿ ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮಾಡಲಾಯಿತು.
ಹಾಗೆಯೇ ಡೆಂಗ್ಯೂ ಮಹಾಮಾರಿ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತಲಿದ್ದು, ಸದಾ ಪ್ರವಾಸಿಗರಿಂದ ತುಂಬಿರುವ ಶೃಂಗೇರಿ ಪಟ್ಟಣದಲ್ಲಿ ಕಸದ ರಾಶಿ ಎಲ್ಲೆಂದರಲ್ಲಿ ಸಂಗ್ರಹವಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಪೌರ ಕಾರ್ಮಿಕರ ಹೋರಾಟಕ್ಕೆ ಸಾಥ್!
ಕೆಲಸ ಖಾಯಂ ಮಾಡುವಂತೆ ಆಗ್ರಹಿಸಿ ಶೃಂಗೇರಿಯ ಪೌರಕಾರ್ಮಿಕರು ಕಳೆದ ಒಂಭತ್ತು ದಿನಗಳಿಂದ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗದೇ ಪ್ರತಿಭಟನೆ ನಡೆಸುತ್ತಿದ್ದು, ಮುಂದೆ ಸಾರ್ವಜನಿಕರ ಮೇಲಾಗಲಿರುವ ವ್ಯತಿರಿಕ್ತ ಆರೋಗ್ಯದ ಪರಿಣಾಮದ ಮೇಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೇರ ಹೊಣೆಯಾಗುತ್ತಾರೆ. ಕೂಡಲೇ ಪೌರ ಕಾರ್ಮಿಕರ ಕೆಲಸ ಖಾಯಂ ಮಾಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿತು. ಹಾಗೂ ಪೌರ ಕಾರ್ಮಿಕರ ಹೋರಾಟಕ್ಕೆ ತನ್ನ ಬೆಂಬಲ ಸೂಚಿಸಿತು. ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿಗಳಾದ ಕಾರ್ತಿಕ್ ಗೌಡ, ಸಹ ಕಾರ್ಯದರ್ಶಿ ಅನ್ವಿತ್ ಶೆಟ್ಟಿ ಹಾಗೂ ಕಾಲೇಜು ಪ್ರಮುಖ್ ರಕ್ಷಿತ್ ಸಾರ್ವಜನಿಕರಾದ ಪ್ರಶಾಂತ್ ಮತ್ತು ಶೃಂಗ ಉಪಸ್ಥಿತರಿದ್ದರು.