ನೆರೆಗೆ ಬಾಳೆಹೊನ್ನೂರು ಮುಳುಗಡೆ: ಬೋಟ್ ಸಂಚಾರ!
– ಬೋಟ್ ಮೂಲಕ ಜನರ ರಕ್ಷಣೆ: ಹಲವೆಡೆ ಕುಸಿತ
– ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲೂ ಮಳೆಯ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ದೋಬಿ ಹಳ್ಳ ಪ್ರವಾಹಕ್ಕೆ ತಗ್ಗು ಪ್ರದೇಶದ ಮನೆಗಳು ಮುಳುಗಡೆಯಾಗಿವೆ. ಮನೆಯಿಂದ ಹೊರಬರಲು ಆಗದೆ ಸಣ್ಣ ಬೋಟ್ ಬಳಸಿ ನೆರೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಶಾಲೆ, ಮದರಸ, ಸಂತೆ ಮಾರುಕಟ್ಟೆ ಮನೆಗಳು ಜಲಾವೃತಗೊಂಡಿದೆ. ಸದ್ಯ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಬೋಟ್ ಬಳಕೆ ಮಾಡುವಂತಾಗಿದೆ.
ಕೊಪ್ಪದ ಹಲವೆಡೆ ಅನಾಹುತ
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆಯು ಕೋಡಿ ಹೊಡೆದಿದೆ. ಪರಿಣಾಮ ಭತ್ತ ನಾಟಿ ಮಾಡಿದ್ದ ಜಮೀನು ಜಲಾವೃತಗೊಂಡಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭೂ ಕುಸಿದಿದೆ. ಮಲ್ಲೇಶ್ವರ ಗುಡ್ಡದಲ್ಲಿ ಭಾರಿ ಪ್ರಮಾಣದ ಧರೆ ಕುಸಿದು, ರಸ್ತೆಯ ಅರ್ಧ ಭಾಗಕ್ಕೆ ಗುಡ್ಡದ ಮಣ್ಣು ಬಂದಿದೆ. 2019ರಲ್ಲಿ ಕುಸಿತ ಕಂಡಿದ್ದ ಸ್ಥಳದ ಸಮೀಪವೇ ಧರೆ ಕುಸಿದಿದೆ. ಬಾಳೆಹೊಳೆ, ಚನ್ನಹಡ್ಡು, ಬಾಳೆಹೊನ್ನೂರು ರಸ್ತೆಯಲ್ಲಿ ಘಟನೆ ನಡೆದಿದೆ.
ಎನ್.ಆರ್.ಪುರ ತಾಲೂಕಿನ ಮಹಲ್ಲೋಡು ಸೇತುವೆ ಮುಳುಗಡೆಯಾಗಿದ್ದು, ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ.ಕಳೆದ ಮೂರು ದಿನದಿಂದ ಸಂಪೂರ್ಣ ಬಿಡುವು ನೀಡಿದ್ದ ವರುಣ ಸೋಮವಾರ ರಾತ್ರಿಯಿಡೀ ಭಾರೀ ಮಳೆಗೆ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆ ಹರಿಯುತ್ತಿರುವ ನೀರಿನಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇತುವೆ ಜಲಾವೃತವಾಗಿದೆ. ಟಿಪ್ಪರ್ ಲಾರಿ ಚಾಲಕ ಸೇತುವೆ ಮೇಲೆ ಸಂಚರಿಸಲು ಹೋಗಿ ಭಯಗೊಂಡು ವಾಪಾಸ್ ಆಗಿದ್ದಾರೆ. ಶೃಂಗೇರಿ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.