ಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿಗೆ ಅದ್ದೂರಿ ತೆರೆ!
* ಹತ್ತು ದಿನಗಳು ವೈಭವದ ದಸರಾ ಆಚರಣೆ
* ಮೆರವಣಿಗೆಯಲ್ಲಿ ಅನೇಕ ಕಲಾ ತಂಡಗಳು ಭಾಗಿ
NAMMUR EXPRESS NEWS
ಬಾಳೆಹೊನ್ನೂರು: ದುರ್ಗಾದೇವಿ ಪೂಜಾ ಸಮಿತಿ ಆಯೋಜಿಸಿದ್ದ ದುರ್ಗಾದೇವಿ ನವರಾತ್ರಿ ಉತ್ಸವದ ಕೊನೆ ದಿನ ದುರ್ಗಾದೇವಿ ಜಲಸ್ತಂಭನ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಮುಖ್ಯ ರಸ್ತೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ಸಮಿತಿ ಪದಾಧಿಕಾರಿಗಳು ಬಿಳಿ ಪಂಚೆ, ಬಿಳಿ ಅಂಗಿ, ಕೇಸರಿ ಪೇಟ, ಶಾಲು ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಈಶ್ವರ, ಗಣಪತಿ, ಗರುಡ ದೇವರುಗಳ ಸ್ತಬ್ದಚಿತ್ರ, ಪಂಚದೇವತೆಗಳ ನಡೆದಾಡುವ ಸ್ತಬ್ಧ ಚಿತ್ರ ಮಹಿಳೆಯರ ವೀರಗಾಸೆ, ಡೊಳ್ಳುಕುಣಿತ, ಪುರುಷ ಮತ್ತು ಮಹಿಳೆಯರ ಹುಲಿ ವೇಷ, ಮರಗೋಲು, ಚಂಡೆ, ಪುರುಷರ ಬೊಂಬೆ ಕುಣಿತ, ನವಿಲು ಕುಣಿತ, ನಂದಿಧ್ವಜ, ಸೋಮನ ಕುಣಿತ ಭಜನೆ, ನಗಾರಿ, ಕೇರಳದ ಚಂಡೆ, ಕಾವಡಿ ನೃತ್ಯ, ಮೀನು ನರ್ತನ, ಧೈಯ್ಯಂ ನೃತ್ಯ, ಪಕ್ಷಿಗಳ ನರ್ತನ, ಹಲಗೆ ಓಲಗ, ಭಜನೆ, ಕಾಡು ಕೋಣ, ಬೇಟೆಗಾರ, ಮಂಗಳೂರಿನ ಕಂಬಳದ ಮಾದರಿ, ಬೃಹತ್ ಆನೆ, ಸಿಂಹ, ಹುಲಿ ವೇಷ, ದೋಣಿ ನೃತ್ಯ ಸೇರಿದಂತೆ 20ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ನೀಡಿದವು.
ಲೋಕೋದ್ಧಾರಕ್ಕಾಗಿ ಸ್ವಾರ್ಥ ಬದಿಗೊತ್ತಿದ ಶ್ರೀರಾಮ!
ಬಾಳೆಹೊನ್ನೂರು ಪಟ್ಟಣದ ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ 15ನೇ ವರ್ಷದ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋಧ್ಯಾಧಿಪತಿ ಪ್ರಭು ಶ್ರೀರಾಮ ಲೋಕದ ಉದ್ದಾರಕ್ಕಾಗಿ ಸ್ವಾರ್ಥ ಬದಿಗೊತ್ತಿ ಜೀವನ ನಡೆಸಿ ಮಾದರಿಯಾಗಿದ್ದರು,
ಸಮಾಜದಲ್ಲಿ ನಮ್ಮ ಬದುಕು ಹೇಗೆ ಇರಬೇಕು ಎಂಬುದಕ್ಕೆ ಶ್ರೀರಾಮ ಆದರ್ಶನಾಗಿದ್ದರೆ ಬದುಕು ಹೇಗೆ ಇರಬಾರದು ಎಂಬುದಕ್ಕೆ ರಾವಣ ಆದರ್ಶನಾಗಿದ್ದಾನೆ. ಉತ್ತಮ ವ್ಯಕ್ತಿಗಳಾಗಿ ಬದುಕಿದರೆ ಮಾತ್ರ ಜೀವನ ಸಾರ್ಥಕವಾಗಲಿದೆ.
ನವರಾತ್ರಿ ವಿಶಿಷ್ಟ ಉತ್ಸವವಾಗಿದ್ದು, ಇದಕ್ಕೆ ಹಲವಾರು ಕಾರಣಗಳಿವೆ. ನಮ್ಮ ಸಂಸ್ಕೃತಿಯಲ್ಲಿ ಮಾತಾ ಪಿತರಿಗೆ, ಆಚಾರ್ಯರಿಗೆ ಹೇಗೆ ಗೌರವ ಸೂಚಿಸಬೇಕು ಎಂಬುದನ್ನು ಹಲವು ಮಾರ್ಗದರ್ಶನಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಮಾತೆಯರು, ಮಾತೃಭೂಮಿ ಮೇಲೆ ನಮಗೆ ಹೇಗೆ ಗೌರವ ಇರಬೇಕು ಎಂಬುದನ್ನು ಪ್ರಭು ಶ್ರೀರಾಮಚಂದ್ರ ತೋರಿಸಿಕೊಟ್ಟಿದ್ದು, ಭಾರತದ ಆಚಾರ, ವಿಚಾರಗಳೇ ನಮ್ಮ ಮಾತೃಭೂಮಿಯಾಗಿದೆ. ಬಾಳೆಹೊನ್ನೂರಿನಲ್ಲಿ ಹಿಂದು ಸಮುದಾಯದ ವಿವಿಧ ಜಾತಿಗಳು ಒಗ್ಗೂಡಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸ ತರುವ ಜತೆಗೆ ನವರಾತ್ರಿ ಮಹೋತ್ಸವಕ್ಕೆ ವಿಶೇಷ ಅರ್ಧ ಬಂದಿದೆ ಎಂದರು. ಬೆಂಗಳೂರಿನ ಯುವ ವಾಗಿ ಹಾರಿಕಾ ಮಂಜುನಾಥ್ ಮಾತನಾಡಿ, ಧರ್ಮ ರಕ್ಷಣೆಗಾಗಿ ದುರ್ಗಾ ಮಾತೆಯು ತಾಯಿ ರೂಪದಲ್ಲಿ ಅವತಾರ ಎತ್ತಿ ಬಂದಿದ್ದಾಳೆ. ಪ್ರಸ್ತುತ ಧರ್ಮವನ್ನು ನಮ್ಮ ಕೈಗೆ ಕೊಟ್ಟಿದ್ದು, ಹಿಂದುಗಳು ಜಾಗೃತರಾಗಬೇಕಿದೆ. ಧರ್ಮದ ಜಾಗೃತಿ ಪಡೆಯಬೇಕಿದೆ ಎಂದರು. ಮಕ್ಕಳಿಗೆ ಸಮಾಜಕ್ಕಿಂತ ತಾಯಿ ಕೊಡುವ ಸಂಸ್ಕಾರ ಮುಖ್ಯವಾಗಿದೆ. ಮಗುವಿನ ಜೀವನದಲ್ಲಿ ತಾಯಿ ಪಾತ್ರ ಮಹತ್ವದ್ದಾಗಿದೆ. ಧರ್ಮವನ್ನು ನಾವು ಉಳಿಸಿ ಬೆಳೆಸದಿದ್ದರೆ ಯಾರು ಬೆಳೆಸುತ್ತಾರೆ? ಹಿಂದುಗಳ ರಾಮಮಂದಿರ ನಿರ್ಮಾಣ ಕನಸು ಸಾಕಾರಗೊಂಡಿದ್ದು, ಮುಂದೆ ಶ್ರೀಕೃಷ್ಣ ಜನ್ಮಭೂಮಿ ಮಥುರಾ ಕನಸು ಸಾಕಾರಗೊಳ್ಳಬೇಕಿದೆ. ಧರ್ಮ ಜಾಗೃತಿ ಮಾಡಿದರೆ ಶ್ರೀಕೃಷ್ಣ ಜನ್ಮಭೂಮಿಯ ಕನಸು ಸಾಕಾರಗೊಳ್ಳಲಿದೆ ಎಂದರು.