ಪೊಲೀಸ್ ಠಾಣೆಯಲ್ಲಿಯೇ ಸೀಮಂತ!
– ಬೀರೂರು: ಗೌರಿ ಹಬ್ಬಕ್ಕೆ ಮಹಿಳಾ ಪೇದೆಗೆ ಬಾಗಿನ
– ಚಿಕ್ಕಮಗಳೂರು: ಹಳ್ಳಿಗಳಿಗೆ ನುಗ್ಗಿದ ಆನೆ ಹಿಂಡು
– ಮೂಡಿಗೆರೆ: ಪದೇ ಪದೇ ಅಪಘಾತ, ಎಚ್ಚರಿಕೆ..!
– ಕೊಪ್ಪ/ಶೃಂಗೇರಿ: ಗಣಪತಿ ಹಬ್ಬಕ್ಕೆ. ಮಳೆ ಅಡ್ಡಿ!
NAMMUR EXPRESS NEWS
ಕಡೂರು: ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯೊಬ್ಬರು ಗರ್ಭಿಣಿಯಾಗಿದ್ದರೂ ಕೆಲಸ ಮಾಡುತ್ತಿದ್ದರು. ಅವರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಠಾಣೆಯಲ್ಲಿಯೇ ಸೀಮಂತ ಮಾಡಿದ್ದಾರೆ. ಈ ಮೂಲಕ ವಿಭಿನ್ನವಾಗಿ ಗೌರಿ ಮತ್ತು ಗಣೇಶ ಹಬ್ಬದ ಆಚರಣೆ ಮಾಡಲಾಗಿದೆ. ಮಹಿಳಾ ಸಿಬ್ಬಂದಿ ಮಮತಾ ಅವರಿಗೆ ಗೌರಿ ಗಣೇಶ ಹಬ್ಬದಂದೇ ಸೀಮಂತ ಮಾಡಲಾಗಿದೆ. ಮಡಿಲಿಗೆ ಅಕ್ಕಿ ತುಂಬಿ, ತಲೆಗೆ ಹೂ ಮುಡಿಸಿ, ಬಳೆ ತೊಡಿಸಿ, ಶಾಸ್ರೋಕ್ತವಾಗಿ ಸೀಮಂತ ಮಾಡಿದ್ದಾರೆ. ಈ ಕೆಲಸ ಮೆಚ್ಚುಗೆಗೆ ಕಾರಣವಾಗಿದೆ.
ಕಾಫಿ ತೋಟದಲ್ಲಿ ಏಳು ಕಾಡಾನೆಗಳ ಓಡಾಟ
ಚಿಕ್ಕಮಗಳೂರು ಜಿಲ್ಲೆಯ ಸಾರಗೋಡು ಗ್ರಾಮದ ಹಲಸೂರು ಎಸ್ಟೇಟ್, ಬೀಡಿಕೆ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಏಳು ಕಾಡಾನೆಗಳು ಸಂಚರಿಸುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಆಲ್ಲೂರು ಅರೇನೂರು ಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಗುಂಪು ಈಗ ಸಾರಗೋಡು ಭಾಗಕ್ಕೆ ಆಗಮಿಸಿವೆ ಎನ್ನಲಾಗಿದೆ. ಈ ಗುಂಪಿನಲ್ಲಿ ಎರಡು ಮರಿಯಾನೆಗಳು ಇದೆ. ಆನೆಗಳು ತೋಟದಲ್ಲಿ ಕಾಫಿ, ಅಡಿಕೆ ಮರಗಳನ್ನು ನಾಶ ಮಾಡಿ, ರೈತರಿಗೆ ಅಪಾರ ಪ್ರಮಾಣದ ಹಾನಿ ಉಂಟುಮಾಡುತ್ತಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಪೊಲೀಸರ ಜಾಗೃತಿ
ಚಾರ್ಮಾಡಿ ಘಾಟಿಯ ಬಣಕಲ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪಘಾತ ತಡೆಗಟ್ಟಲು ಪೊಲೀಸ್ ಇಲಾಖೆ ವತಿಯಿಂದ ಬ್ಯಾರಿಕೆಡ್ ಗಳನ್ನು ಅಳವಡಿಸಲಾಗಿದೆ. ಪೊಲೀಸರು ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು. ಚಾರ್ಮಾಡಿ ಘಾಟಿಯ ತಿರುವಿನ ಬಳಿ ರಸ್ತೆ ಬದಿಯ ಮೋರಿಗಳು ಬಿರುಕು ಬಿಟ್ಟಿದೆ. ಬಿರುಕು ಬಿಟ್ಟ ಪ್ರದೇಶದಲ್ಲಿ ಬ್ಯಾರಿಕೆಡ್ ಅಳವಡಿಸಿ, ಮುಂಜಾಗ್ರತಾ ಕ್ರಮವನ್ನು ಬಣಕಲ್ ಪೊಲೀಸರು ಕೈಗೊಂಡರು. ಬಸ್ ಲಾರಿ ಮೊದಲಾದ ಘನ ವಾಹನಗಳು ಸಂಚರಿಸುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈಗಾಗಲೇ ಅನೇಕ ಅಪಘಾತ ಸಂಭವಿಸಿವೆ.
ಕೊಪ್ಪ/ಶೃಂಗೇರಿ: ಗಣಪತಿ ಹಬ್ಬಕ್ಕೆ. ಮಳೆ ಅಡ್ಡಿ!
ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಮಳೆ ಆಗುತ್ತಿದ್ದು, ಇದೀಗ ಗಣೇಶ ಹಬ್ಬದ ವೇಳೆಗೆ ಮಳೆ ಜೋರಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ತಾಲೂಕಲ್ಲಿ ಕಳೆದ ಎರಡು ದಿನಗಳಿಂದ ಮಳೆ ಹೆಚ್ಚಾಗಿದೆ. ಅದರಲ್ಲೂ ಕೊಪ್ಪ, ಶೃಂಗೇರಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಇದರಿಂದ ನದಿ, ಹಳ್ಳಗಳಲ್ಲಿ ನೀರು ಹೆಚ್ಚಿದೆ.