ಚಿಕ್ಕಮಗಳೂರು ಜಿಲ್ಲೆ: ಮಳೆ ಅಪ್ಡೇಟ್
ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿತಾಣಗಳು ಈಗ ಅಪಾಯಕಾರಿ ..ಮಳೆ ಹೆಚ್ಚಾಗಿದೆ..!
– ಜಿಲ್ಲಾ ಆಡಳಿತ ಮಂಡಳಿ ಮನವಿ: ಅಬ್ಬರಿಸುತ್ತಿರುವ ಜಿಲ್ಲೆಯ ನದಿಗಳು
– ತುಂಗೆಗೆ ಬಾಗಿನ ಅರ್ಪಿಸಿದ ಶೃಂಗೇರಿ ಶ್ರೀಗಳು
– ನೆಮ್ಮಾರಿನ ತೂಗು ಸೇತುವೆ ಮುರಿತ
– ಮಳೆಯ ಅಬ್ಬರಕ್ಕೆ ಶಾಸಕರ ಊರಿನ ರಸ್ತೆ ಸಂಪರ್ಕ ಕಡಿತ
– ಕೊಪ್ಪದ ಕೊಗ್ರೆ ಸೇತುವೆ ಮುಳುಗಡೆ: ಜನರಿಗೆ ಸಂಕಟ
NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸದ ಯೋಚನೆ ಇದ್ದರೆ ಮುಂದೂಡುವುದು ಉತ್ತಮ ಜೊತೆಗೆ ನದಿಯ ದಡದಿಂದ ದೂರವಿರಲು ಜಿಲ್ಲಾಧಾಕಾರಿಗಳು ಸೂಚಿಸಿದ್ದಾರೆ.
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾಯದ ಮಟ್ಟವನ್ನು ಮೀರಿ ತುಂಗಾ ನದಿ ಹರಿಯುತ್ತಿದೆ.ಇದರಿಂದ ದೇವಾಲಯದ ಸುತ್ತಮುತ್ತ ಪ್ರವಾಹ ಉಂಟಾಗಿದ್ದು, ದೇಗುಲದ ಬಳಿಯಿರುವ ಸ್ನಾನಘಟ್ಟ ಮುಳುಗಡೆಯಾಗಿದೆ.ಶೃಂಗೇರಿಯ ಐಬಿ ಮತ್ತು ಮಠದಲ್ಲಿರುವ ಮಳೆ ಮಾಪಕದ ಪ್ರಕಾರ, ಭಾನುವಾರ ಬೆಳಗ್ಗೆ 6.00 ರಿಂದ ಸೋಮವಾರ ಬೆಳಗ್ಗೆ 6.00 ವರೆಗೆ ಬರೋಬ್ಬರಿ ಆರು ಇಂಚು ಅಂದರೆ ಸುಮಾರು 15 ಸೆ.ಮೀಕ್ಕೂ ಅಧಿಕ ಮಳೆಯಾಗಿದೆ ಎಂದು ವರದಿಯಾಗಿದೆ.
ಅಲ್ಲದೇ ನೆರೆ ನೀರಿನಿಂದಾಗಿ ದೇಗುಲ ಸಮೀಪದ ಗಾಂಧಿ ಮೈದಾನ ಸಂಪೂರ್ಣ ಜಲಾವೃತವಾಗಿದ್ದು, ಹಲವು ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ. ಜೊತೆಗೆ ಮೈದಾನದಲ್ಲಿ ಜಾನುವಾರುಗಳನ್ನು ಬೋಟ್ ಮೂಲಕ ಸ್ಥಳಾಂತರಿಸಲಾಗಿದೆ. ಸದ್ಯ ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳನ್ನು ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಟ್ಯಾಕ್ಟರ್ ಮೂಲಕ ಎಳೆದು ಹೊರ ತಂದಿದ್ದಾರೆ. ಶೃಂಗೇರಿಯ ಪ್ಯಾರಲಲ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಬ್ಯಾರಿಕೇಡ್ ಹಾಕಲಾಗಿದೆ.
ಗಂಗಾ ಪೂಜೆ ಅರ್ಪಿಸಿದ ಶೃಂಗೇರಿ ಶ್ರೀಗಳು
ಶೃಂಗೇರಿ: ಶೃಂಗೇರಿಯಲ್ಲಿ ಭಾರೀ ಮಳೆ ಆಗುತ್ತಿದ್ದು ಉಕ್ಕಿದ ತುಂಗೆಗೆ ಶೃಂಗೇರಿ ಜಗದ್ಗುರು ಶ್ರೀಶ್ರೀ ವಿದುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳು ಗಂಗಾ ಪೂಜೆ ಸಲ್ಲಿಸಿದ್ದಾರೆ.ಪ್ರತಿ ವರ್ಷ ತುಂಗೆಯು ಉಕ್ಕಿ ಪ್ರವಾಹ ಬಂದಾಗ ಶೃಂಗೇರಿ ಶ್ರೀಮಠದಿಂದ ತುಂಗಾ ತಟದಲ್ಲಿ ಬಾಗಿನ ಸಮರ್ಪಣೆ ಕಾರ್ಯ ಶ್ರೀ ಜಗದ್ಗುರುಗಳಿಂದ ನೆರವೇರುತ್ತದೆ. ಅದರಂತೆ ಈ ಬಾರಿ ಕೂಡ ಉಭಯ ಜಗದ್ಗುರುಗಳ ಅಪ್ಪಣೆಯ ಮೇರೆಗೆ ಬಾಗಿನ ಸಮರ್ಪಣಾ ಕಾರ್ಯ ನೆರವೇರಿತು.
ನೆಮ್ಮಾರಿನ ತೂಗು ಸೇತುವೆ ಮುರಿತ
ಶೃಂಗೇರಿ: ಭಾರೀ ಮಳೆಯಿಂದ ಉಂಟಾದ ತುಂಗಾ ಪ್ರವಾಹಕ್ಕೆ ನೆಮ್ಮಾರಿನ ತೂಗು ಸೇತುವೆ ಮುರಿದಿದೆ. ಇದರಿಂದ ಸುಂಕದಮಕ್ಕಿ- ನೆಮ್ಮಾರು ಸಂಪರ್ಕ ಕಡಿತಗೊಂಡಿದ್ದು ಈ ಭಾಗದ ಜನರ ಪರದಾಟ.
ಮತ್ತೆ ಮಳೆ ಹೆಚ್ಚಳ: ಶೃಂಗೇರಿಯಲ್ಲಿ ಆತಂಕ
ರಾತ್ರಿ ಕೊಂಚ ಬಿಡುವು ನೀಡಿದ್ದ ಮಳೆರಾಯ ಬುಧವಾರ ಬೆಳಿಗ್ಗೆಯಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ರಾತ್ರಿ ಇಳಿಮುಖಗೊಂಡಿದ್ದ ತುಂಗಾ ಪ್ರವಾಹ ಈಗ ಮತ್ತೆ ಏರಿಕೆಯಾಗಿದೆ. ಕಳೆದ ಎರಡು ಗಂಟೆಗಳಲ್ಲಿ ನದಿಯ ನೀರಿನ ಮಟ್ಟ ಸುಮಾರು 4 ಅಡಿಗಳಷ್ಟು ಏರಿಕೆಯಾಗಿದೆ. ಭಾರೀ ಮಳೆಗೆ ಶೃಂಗೇರಿ ಪಟ್ಟಣದ ಕೆರೆದಂಡೆ ಸಮೀಪ ಮನೊಂದರ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಳೆಯ ಅಬ್ಬರಕ್ಕೆ ಬಸಾಪುರ ರಸ್ತೆ ಸಂಪರ್ಕ ಕಡಿತ!
ಬಾಳೆಹೊನ್ನೂರು: ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ಜನರಿಗೆ ತುಂಬಾ ತೊಂದರೆ ಊಂಟಾಗಿದೆ.ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯಲ್ಲಿ ಶಾಸಕ ಟಿ.ಡಿ ರಾಜೇಗೌಡ ಅವರ ಮನೆಯ ಮುಂಭಾಗ ಬಸಾಪುರ, ಬೊಗಸೆ-ಶಿರವಾಸೆ ರಸ್ತೆಯಿಂದ ಕಡವಂತಿ ಮುಂತಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಭಾರೀ ಮಳೆಗೆ ಬಿರುಕು ಬಿಟ್ಟಿದ್ದು,ಗುಂಡಿ ಬಿದ್ದು ಸಂಪರ್ಕ ಕಡಿತಗೊಂಡಿದೆ.ಭಾರೀ ಮಳೆಯಿಂದ ಕೆರೆಯಿಂದ ಅಧಿಕ ಪ್ರಮಾಣದ ನೀರು ಹೊರ ಹರಿದದ್ದರಿಂದ ರಸ್ತೆ ಗುಂಡಿ ಬಿದ್ದು ಸಂಪರ್ಕ ಕಡಿತಗೊಂಡಿದೆ. ಈ ಭಾಗದ ಜನರು ಬಾಳೆಹೊನ್ನೂರು,ಸಂಗಮೇಶ್ವರ ಪೇಟೆ,ಚಿಕ್ಕಮಗಳೂರು,ಖಾಂಡ್ಯ,ಕಡಬಗೆರೆ ಮುಂತಾದ ಕಡೆ ತೆರಳಲು ಪರದಾಡುವಂತಾಗಿ ಮತ್ತೆ ಪರ್ಯಾಯ ಮಾರ್ಗ ಬಳಸಿ ಸಂಚರಿಸುವಂತಾಯಿತು.
ಕೊಪ್ಪದ ಕೊಗ್ರೆ ಸೇತುವೆ ಮುಳುಗಡೆ
ಕೊಪ್ಪ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಕೊಗ್ರೆ ಸಮೀಪದ ಹುಲ್ಲಿನ ಗದ್ದೆ ಸೇತುವೆ ಜಲಾವೃತಗೊಂಡಿದೆ. ಇದರಿಂದಾಗಿ ಶೃಂಗೇರಿ – ಕೊಗ್ರೆ ಸಂಪರ್ಕ ಕಡಿತಗೊಂಡಿತ್ತು.ಸೇತುವೆ ಜಲಾವೃತ ಹಿನ್ನೆಲೆ ಸ್ಥಳೀಯರು ಸಂಚಾರಕ್ಕೆ ಪರದಾಡುವಂತಾಯಿತು.