ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ..
– ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಸುರೇಂದ್ರ ಯಡದಾಳ್
– ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ ಆದಿಚುಂಚನಗಿರಿ ಶ್ರೀಗಳು
NAMMUR EXPRESS NEWS
ಶೃಂಗೇರಿ: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ,ಚಿಕ್ಕಮಗಳೂರು ಹಾಗೂ ತಾಲೂಕು ಘಟಕ,ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನ -2025 ರ ಆಹ್ವಾನ ಪತ್ರಿಕೆಯನ್ನು ಶ್ರೀಆದಿಚುಂಚನಗಿರಿ ಶಾಖಾ ಮಠ ಶೃಂಗೇರಿ ಇಲ್ಲಿನ ಪೀಠಾಧೀಶರಾದ ಶ್ರೀಶ್ರೀಗುಣನಾಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಓಟಿತೋಟ ರತ್ನಾಕರ್,ತಾಲೂಕು ಘಟಕದ ಅಧ್ಯಕ್ಷರಾದ ಆಶೀಶ್ ದೇವಾಡಿಗ,ಸ್ವಾಗತ ಸಮಿತಿ ಅಧ್ಯಕ್ಷರಾದ ಎ.ಎಸ್ ನಯನ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಜಿಲ್ಲಾಧ್ಯಕ್ಷ ಓಟಿತೋಟ ರತ್ನಾಕರ್ರವರು ಬೆಳಿಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು ಮೊದಲಿಗೆ ರಾಷ್ಟ್ರ ಧ್ವಜಾರೋಹಣವನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿಯವರು ನೆರವೇರಿಸಲಿದ್ದು ನಂತರ ನಾಡ ಧ್ವಜಾರೋಹಣವನ್ನು ಸಮ್ಮೇಳನದ ಸ್ವಾಗತ ಸಮಿಯ ಅಧ್ಯಕ್ಷರಾದ ಎ.ಎಸ್ ನಯನರವರು ನೆರವೇರಿಸಲಿದ್ದಾರೆ ನಂತರ ಜಾನಪದ ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಓಟಿತೋಟ ರತ್ನಾಕರ್ ರವರು ನೆರವೇರಿಸಲಿದ್ದಾರೆ, ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಶೃಂಗೇರಿ ತಾಲೂಕಿನ ಹಿರಿಯ ಜಾನಪದ ಕಲಾವಿದರಾದ ಶ್ರೀ ಸುರೇಂದ್ರ ಯಡದಾಳ್ರವರು ಆಯ್ಕೆಯಾಗಿರುವುದಾಗಿ ತಿಳಿಸಿದರು.
9:00 ಗಂಟೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಶ್ರೀಮಠದ ಆವರಣದಿಂದ ಶಂಕರಾಚಾರ್ಯ ವೃತ್ತದವರೆಗೆ ನಡೆಯಲಿದೆ. 10:30 ಕ್ಕೆ ಜಾನಪದ ಪರಿಷತ್ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶಾಸಕ ರಾಜೇಗೌಡ ಸಮ್ಮೇಳನದ ಉದ್ಘಾಟಿಸಲಿದ್ದಾರೆ.
12ಗಂಟೆಯಿಂದ ರಾಜ್ಯ ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿಗಳಾದ ಕೆ.ಎಸ್ ಕೌಜಲಗಿ ಅಧ್ಯಕ್ಷತೆಯಲ್ಲಿ ಜಾನಪದ ಗೋಷ್ಠಿ ನಡೆಯಲಿದ್ದು ರಂಗೋಲಿಯಲ್ಲಿ ಪರಿಸರ ಪ್ರಜ್ಞೆ ವಿಷಯವಾಗಿ ಡಾ.ಭಾರತಿ ಮರವಂತೆ, ಮಲೆನಾಡಿನ ಜಾನಪದ ಕಲೆಗಳು ಎಂಬ ವಿಷಯವಾಗಿ ಸುಧೀರ್ ಕುಮಾರ್ ಮುರೊಳ್ಳಿ, ಮಹಿಳಾ ಜಾನಪದ ಎಂಬ ವಿಷಯವಾಗಿ ಎಸ್ ಎನೊ ಚಂದ್ರಕಲಾರವರುಗಳು ಉಪನ್ಯಾಸ ನೀಡಲಿದ್ದಾರೆ.
2ಗಂಟೆಯಿಂದ ಜಿಲ್ಲಾ ಮಟ್ಟದ ಜಾನಪದ ಕಲಾ ಪ್ರದರ್ಶನ ನಡೆಯಲಿದ್ದು, ಸಂಜೆ 4 ಗಂಟೆಯಿಂದ ಜಾನಪದ ಬಹಿರಂಗ ಅಧಿವೇಶನ ನಡೆಯಲಿದೆ. 5 ಗಂಟೆಯಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರಾದ ಜಾನಪದ ಕಲಾವಿದರಾದ ಕೊಪ್ಪದ ಬಲಗಾರು ಗಣೇಶ್ ಹಾಗೂ ವೀರಗಾಸೆ ಕಲಾವಿದರಾದ ಕಡೂರಿನ ನವೀನ್ ಕುಮಾರ್ ಅರೇಹಳ್ಳಿಯವರಿಗೆ “ಜಾನಪದ ಪ್ರಪಂಚ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 7 ಗಂಟೆಯಿಂದ ನಡೆಯಲಿರುವ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಮೂಲ ಕಲೆಯಾದ ಅಂಟಿಕೆ ಪಿಂಟಿಕೆ ಪ್ರದರ್ಶನ ನಡೆಯಲಿದೆ. ಅಕ್ಷರ ಮ್ಯೂಸಿಕಲ್ರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತವನ್ನು ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ, ಚಿಕ್ಕಮಗಳೂರು ಜಿಲ್ಲಾ ಹಾಗೂ ಶೃಂಗೇರಿ ತಾಲೂಕು ಕಜಾಪ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಕೋರಿದ್ದಾರೆ.