ಗೋಮಾಳ, ಸೊಪ್ಪಿನಬೆಟ್ಟ ಮಂಜೂರಾತಿಗೆ ಬ್ರೇಕ್!?
– ಭೂಗಳ್ಳರ ತಡೆಗೆ ಆಪ್ ಸಿದ್ಧತೆ: ಅಕ್ರಮ ಭೂ ಒತ್ತುವರಿ ತೆರವು
– ಕೆರೆ, ಸ್ಮಶಾನ, ಸರ್ಕಾರಿ ಜಾಗ ಒತ್ತುವರಿ ತೆರವು: ಸರ್ಕಾರದ ಆದೇಶ ಏನು?
NAMMUR EXPRESS NEWS
ಚಿಕ್ಕಮಗಳೂರು: ರಾಜ್ಯಾದ್ಯಂತ ಇರುವ ಸರ್ಕಾರಿ ಜಮೀನನ್ನು ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡಿರುವವರಿಂದ ರಕ್ಷಿಸಿಕೊಳ್ಳುವ ಸಲುವಾಗಿ ಲ್ಯಾಂಡ್ ಬೀಟ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಮುಂದಿನ ತಿಂಗಳ 15ರಂದು ಬಿಡುಗಡೆ ಆಗಲಿದೆ. ಕಂದಾಯ ಇಲಾಖೆ ಜಮೀನು ಸೇರಿದಂತೆ ಕೆರೆ, ಸ್ಮಶಾನ ಇನ್ನಿತರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳಿಗೆ ಸೇರಿದ ಜಾಗಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಶೀಘ್ರವೇ ಆಪ್ ನಲ್ಲಿ ಸೇರ್ಪಡೆ ಗೊಳಿಸಲು ಸಿದ್ಧತೆ ನಡೆದಿದೆ.
ಶಿಕ್ಷಣ ಇಲಾಖೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇನ್ನಿತರೆ ಇಲಾಖೆಗಳಿಗೆ ಸೇರಿದಂತೆ ಸಾಕಷ್ಟು ಜಮೀನು ರಾಜ್ಯದಲ್ಲಿದೆ ಅದರ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡಬೇಕು ಎಂದು ಕೋರಿದ್ದೇವೆ. ಪ್ರತಿ ಗ್ರಾಮ ಪಂಚಾಯ್ತಿವಾರು ಮಾಹಿತಿಯನ್ನು ಸಹ ಆಪ್ನಲ್ಲಿ ಅಡಕಗೊಳಿಸಲಾಗುವುದು. ಜಮೀನುಗಳಿಗೆ ಸಂಬಂಧಿಸಿದ ಸರ್ವೇ ನಂಬರ್ ಸಹಿತ ಇತರೆ ಮಾಹಿತಿಗಳಿರುವ ಮ್ಯಾಪ್ಗಳನ್ನು ತಯಾರಿಸಲಾಗುತ್ತಿದ್ದು ಈ ಆಪ್ ತೆರೆದರೆ ನಾವು ನಿಂತಿರುವ ಜಾಗದ ಮಾಹಿತಿ ಸಹ ಸ್ಥಳದಲ್ಲೇ ಸಿಗಲಿದೆ ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮಾಹಿತಿ ನೀಡಿದ್ದಾರೆ.
ಸೊಪ್ಪಿನ ಬೆಟ್ಟ ಮಂಜೂರಾತಿ ಇಲ್ಲ:
ಸೊಪ್ಪಿನ ಬೆಟ್ಟ ಪ್ರದೇಶದಲ್ಲಿ ಯಾರಿಗೂ ಭೂ ಮಂಜೂರಾತಿ ಮಾಡಲು ಸಾಧ್ಯವಿಲ್ಲ. 2010 ರಲ್ಲಿ ಹೊರಡಿಸಲಾದ ಸರ್ಕಾರದ ಸುತ್ತೋಲೆಯಲ್ಲಿ ಸೊಪ್ಪಿನ ಬೆಟ್ಟ ಪ್ರದೇಶದಲ್ಲಿ ಭೂ ಮಂಜೂರಾತಿಯನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಮೀನು ಮಂಜೂರು ಮಾಡುವ ಮತ್ತು ಸಾಗುವಳಿ ಸಕ್ರಮೀಕರಣಗೊಳಿಸುವ ದಿಸೆಯಲ್ಲಿ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ತೀರ್ಮಾನಿಸಲು ಕಾನೂನು ಇಲಾಖೆಗೆ ಕಳಿಸಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕುಗಳ ಸೊಪ್ಪಿನ ಬೆಟ್ಟಗಳಲ್ಲಿ ಈಗಾಗಲೇ ಭೂ ಮಂಜೂರಾತಿ ನೀಡಲಾಗಿದ್ದು ಜನವಸತಿ, ಕೃಷಿ ಕಾರ್ಯ ನಡೆಸಲಾಗುತ್ತಿದೆ. ಅಂತಹವರ ಕತೆ ಏನು ಎನ್ನುವ ಪ್ರಶ್ನೆ ಎದ್ದಿದೆ. ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಗೋಮಾಳಗಳಲ್ಲಿ 50, 53 ಸೇರಿದಂತೆ ಇತರೆ 5 ರೀತಿಯ ಕಾಯ್ದೆಯಡಿ ಗಳಲ್ಲಿ ಹಕ್ಕುಪತ್ರ ನೀಡಲು ಅವಕಾಶವಿಲ್ಲ. ಈ ಬಗ್ಗೆಯೂ ಉನ್ನತ ಮಟ್ಟದಲ್ಲಿ ಚರ್ಚೆ ಮಾಡಿದ್ದೇವೆ. ಈ ವಿಷಯ ಸಹ ಕಾನೂನು ಇಲಾಖೆ ಮುಂದಿದೆ ಎಂದಿದ್ದಾರೆ.
ಅಕ್ರಮ ಭೂಮಿ ತೆರವು: ವಸತಿ ಯೋಜನೆಗೆ ಬಳಕೆ
ಭೂಕಬಳಿಕೆ ಆಗಿರುವ ಭೂಮಿಯನ್ನು ಬಿಡಿಸಿಕೊಂಡು ವಿವಿಧ ಸರ್ಕಾರಿ ವಸತಿ ಯೋಜನೆಗಳು, ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಎಲ್ಲಾ ಆರ್ಟಿಸಿಗಳನ್ನು ಆಧಾರ್ ಕಾರ್ಡ್ ಗಳೊಂದಿಗೆ ಜೋಡಿಸುವ ಕಾರ್ಯ ಪ್ರಗತಿ ಯಲ್ಲಿದೆ. ಈಗಾಗಲೇ ಶೇ.50ರಷ್ಟು ಜೋಡಣೆ ಆಗಿದ್ದು. ಇದರಿಂದ ರೈತರಿಗೆ ಅನುಕೂಲವಾಗಲಿದ್ದು ನಕಲಿ ದಾಖಲೆಗಳನ್ನು ಸೃಷ್ಟಿಸುವುದಕ್ಕೆ ಕಡಿವಾಣ ಬೀಳಲಿದೆ ಎಂದರು.