ಚಿಕ್ಕಮಗಳೂರು ಟಾಪ್ ನ್ಯೂಸ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೊಳೆ ಪಾಲು!?
– ಮೂಡಿಗೆರೆ: ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ
– ಶೃಂಗೇರಿಯಲ್ಲಿ ಸ್ನಾನಕ್ಕೆ ಹೋದ ಜ್ಯೋತಿಷ್ಯ ಪಂಡಿತ ನಾಪತ್ತೆ
– ಕೊಪ್ಪ: ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ರೆ ಕೇಸ್
– ಕಡೂರು: ದನಗಳ್ಳರ ಬಂಧನ: ಜಾನುವಾರು ರಕ್ಷಣೆ
– ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂದುವರಿದ ಜಿಟಿ ಜಿಟಿ ಮಳೆ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಮಳೆ ದುರಂತಗಳು ಇನ್ನು ಮುಂದುವರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಬ್ಬರು ಹೊಳೆ ಪಾಲಾಗಿರುವ ಶಂಕೆ ಎದುರಾಗಿದೆ.
ಮೂಡಿಗೆರೆಯಲ್ಲಿ ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ ನಾಪತ್ತೆಯಾದರೆ, ಶೃಂಗೇರಿಯಲ್ಲಿ ಸ್ನಾನಕ್ಕೆ ಹೋದ ಜ್ಯೋತಿಷ್ಯ ಪಂಡಿತ ನಾಪತ್ತೆಯಾಗಿದ್ದಾರೆ.
ಶೃಂಗೇರಿಯಲ್ಲಿ ಸನ್ಮಾನ ಸ್ವೀಕರಿಸಲು ಬಂದವ ನಾಪತ್ತೆ
ಶೃಂಗೇರಿಯಲ್ಲಿ ಸನ್ಮಾನ ಸ್ವೀಕರಿಸಲು ಆಗಮಿಸಿದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಆಂಧ್ರಪ್ರದೇಶದ ಮದನಪಲ್ಲಿಯ ನಿವಾಸಿ ಶಿವಕುಮಾರ ಶರ್ಮ (41)
ಆಗಸ್ಟ್ 1 ರಂದು 20 ರಿಂದ 25 ಖ್ಯಾತ ಜೋತಿಷ್ಯ ಪಂಡಿತರಿಗೆ ಶ್ರೀ ಮಠದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧುಶೇಖರ ಸ್ವಾಮೀಜಿಯಿಂದ ಸನ್ಮಾನ ಕೂಡ ಶರ್ಮರು ಸ್ವೀಕರಿಸಿದ್ದಾರೆ. ಆದರೆ, ಆಗಸ್ಟ್ 2 ರಂದು ಬೆಳಗಿನ ಜಾವ ಸ್ನಾನ ಮಾಡಿ ಜಪ ಮಾಡಿ ಬರುತ್ತೇನೆ ಎಂದು ಹೋದವರು ನಾಪತ್ತೆಯಾದ ಬಗ್ಗೆ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.
ದನ ಕಟ್ಟಲು ಹೋಗಿ ಹೊಳೆಗೆ ಬಿದ್ದು ರೈತ ಸಾವು?
ಮೂಡಿಗೆರೆ: ಜಾನುವಾರು ಕಟ್ಟಲು ಹೋದ ರೈತರೊಬ್ಬರು ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿ. ಎಲ್ ಗೋಪಾಲಗೌಡ (63) ಆಕಸ್ಮಿಕವಾಗಿ ಹೊಳೆಗೆ ಜಾರಿಬಿದ್ದ ರೈತ. ಜಾನುವಾರುಗಳನ್ನು ಕಟ್ಟಲು ಹೋದಾಗ ಆಕಸ್ಮಿಕವಾಗಿ ತುಂಬಿಹರಿಯುತ್ತಿದ್ದ ಹೇಮಾವತಿ ಉಪನದಿಗೆ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ನೀರು ರಭಸವಾಗಿ ಹರಿಯುತ್ತಿದ್ದರಿಂದ ಗೋಪಾಲ ಅವರಿಗೆ ಮೇಲೇಳಲಾಗದೆ ಹೊಳೆಯ ಹರಿವಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಗೋಪಾಲ ಅವರಿಗೆ ಶೋಧ ನಡೆಸಿದ್ದು ಪತ್ತೆಯಾಗಿಲ್ಲ ಎನ್ನಲಾಗಿದೆ.
ಕೊಪ್ಪ: ಮದ್ಯಪಾನಿ ಬೈಕ್ ಚಾಲಕನಿಗೆ ಬಿತ್ತು 10 ಸಾವಿರ ರೂ. ದಂಡ!
ಕೊಪ್ಪ: ಕೊಪ್ಪ ಪಟ್ಟಣದ ಸುಬಾಷ್ ರಸ್ತೆಯಲ್ಲಿ ಮದ್ಯಪಾನ ಮಾಡಿ ಬೈಕ್ ಓಡಾಸುತ್ತಿದ್ದ ಯುವಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಮಾಡಿದ್ದಾರೆ.
ಪಿಎಸ್ಐ ಬಸವರಾಜ್ ಜಿ.ಕೆ., ಎ ಎಸ್ ಐ .ರಮೇಶ್ ಶೆಟ್ಟಿ, ಪ್ರಶಾಂತ, ಮತ್ತು ಓಂಕಾರ್ ವಾಹನ ತಪಾಸಣೆ ಮಾಡುತ್ತಿದ್ದಾಗ ಪ್ರಜ್ವಲ್ ಎಂಬಾತ ಪಾನಮತ್ತನಾಗಿ ಬೈಕ್ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಈತನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಮಾಡಿದ್ದು, ಸೋಮವಾರ ಕೊಪ್ಪ ನ್ಯಾಯಾಲಯದ ನ್ಯಾಯಾಧೀಶರು 10,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಈವರೆಗೆ ಒಟ್ಟು 25 ಪ್ರಕರಣಗಳಲ್ಲಿ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಿದವರಿಗೆ ₹ 2.50 ಲಕ್ಷದಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು: ದನ ಕಳ್ಳತನ ಪ್ರಕರಣ; ಆರೋಪಿಗಳ ಬಂಧನ
ಚಿಕ್ಕಮಗಳೂರು: ದನಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ, ಹಣ ಹಾಗೂ ಜಾನುವಾರು ಗಳನ್ನು ರಕ್ಷಣೆ ಮಾಡುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದನಕಳ್ಳತನ ಮಾಡುತ್ತಿದ್ದ ಅಜ್ಜಂಪುರ ನಿವಾಸಿಗಳಾದ ಉಮ್ಮರ್ ಫಾರುಕ್ ಖಾನ್, ಮುಬಾರಕ್ ಬಂಧಿತ ಆರೋಪಿಗಳು. ಬಂಧಿತರಿಂದ 4ಲಕ್ಷ 30 ಸಾವಿರ ರೂ. ಮೌಲ್ಯದ ಆಶೋಕ ಲೈಲ್ಯಾಂಡ್ ವಾಹನ, 1.10 ಲಕ್ಷ ರೂ. ಮೌಲ್ಯದ ಮೂರು ಹಸು ಒಂದು ಹೋರಿ, ಕರುಗಳು ಸೇರಿ 6.30 ಲಕ್ಷ ರೂ. ಮೌಲ್ಯದಷ್ಟು ಹಸು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ತಾಲೂಕಿನ ವಿವಿಧೆಡೆ ದನಗಳ ಕಳ್ಳತನ ಪ್ರಕರಣ ನಡೆದಿದ್ದು, ತಂಗಲಿ ಬೈಪಾಸ್ ರಸ್ತೆಯ ಬ್ರಿಡ್ಜ್ ಬಳಿ ಅನುಮಾನಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾಗ ಆಶೋಕ ಲೈಲ್ಯಾಂಡ್ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ ನಾಲ್ಕು ಹಸುಗಳು ವಾಹನದಲ್ಲಿ ಇದ್ದದ್ದು ಕಂಡು ಬಂದಿದೆ. ಈ ಸಂಬಂಧ ಮೂರು ಜನರನ್ನು ವಿಚಾರಣೆ ಒಳಪಡಿಸಿದಾಗ ಸಮಂಜಸ ಉತ್ತರ ನೀಡಿಲ್ಲ ಹಾಗೂ ಜಾನುವಾರು ಸಾಗಟ ಸಂಬಂಧ ಸೂಕ್ತ ದಾಖಲೆ ಇಲ್ಲದಿದ್ದರಿಂದ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುಂದುವರಿದ ಜಿಟಿ ಜಿಟಿ ಮಳೆ: ಧರೆ ಕುಸಿತ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು ಮಳೆಯ ತೀವ್ರತೆ ಕಡಿಮೆ ಆಗಿದೆ. ಆದರೆ ಗಾಳಿ ಮಳೆಯಿಂದ ಗುಡ್ಡ, ಧರೆ ಕುಸಿತ ಮುಂದುವರಿದಿದೆ.