ಚಿಕ್ಕಮಗಳೂರು ಟಾಪ್ 3 ನ್ಯೂಸ್
ತಂದೆಯಿಂದ ಹಾರೆಯಿಂದ ಹೊಡೆದು ಮಗನ ಕೊಲೆ!
– ಮೂಡಿಗೆರೆಯ ಇಂದಿರಾನಗರ ಎಂಬಲ್ಲಿ ಘಟನೆ
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್ ಇನ್ನಿಲ್ಲ
ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ವಿರುದ್ಧ ಕಾಫಿನಾಡಲ್ಲಿ ಪ್ರತಿಭಟನೆ
NAMMUR EXPRESS NEWS
ಮೂಡಿಗೆರೆ: ತಂದೆಯೇ ತನ್ನ ಮಗನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ, ತಾಲೂಕಿನ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರ ಎಂಬಲ್ಲಿ ಈ ಘಟನೆ ನಡೆದಿದೆ.
ತಂದೆ ಗೋಪಾಲಗೌಡ ತನ್ನ ಮಗ ಪ್ರಸನ್ನ(38)ಎಂಬುವರನ್ನು ಮಂಗಳವಾರ ರಾತ್ರಿ ಮಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇಂದಿರಾ ನಗರದ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ತಂದೆ ಹಾಗೂ ಮಗ ರಾತ್ರಿ ಪರಸ್ಪರ ಜಗಳ ಮಾಡಿಕೊಂಡಿದ್ದು ಜಗಳ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಹಾರೆಯಿಂದ ಮಗನ ತಲೆಗೆ ಹೊಡೆದಿದ್ದು ತೀವ್ರ ಗಾಯಗೊಂಡ ಮಗ ಪ್ರಸನ್ನ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಗೋಪಾಲಗೌಡನನ್ನು ಬಂಧಿಸಿದ್ದಾರೆ. ಮೃತ ಪ್ರಸನ್ನ ಗೆ ವಿವಾಹವಾಗಿದ್ದು ಪತ್ನಿ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ಕುಡಿತದಿಂದ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಮಗನ ಕೊಲೆಯಲ್ಲಿ ಅಂತ್ಯವಾಗಿದೆ.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್ ಇನ್ನಿಲ್ಲ
ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಮಣ್ಣ ಬಣಕಲ್ (57) ಹೃಧಯಾಘಾತದಿಂದ ನಿಧನ ಹೊಂದಿದ್ದಾರೆ.
ಇವರು ಮೂಡಿಗೆರೆ ತಾಲೂಕು ಬಣಕಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಒಂದು ಅವಧಿ ಸೇವೆ ಸಲ್ಲಿಸಿದ್ದರು. ಬುಧವಾರ ಸಂಜೆ 7 ಗಂಟೆ ಸಮಯದಲ್ಲಿ ಬಣಕಲ್ ಪಟ್ಟಣದಲ್ಲಿ ಅವರಿಗೆ ಹೃದಯಾಘಾತವಾಗಿ ಏಕಾಏಕಿ ಕುಸಿದಿದ್ದಾರೆ. ತಕ್ಷಣ ಹತ್ತಿರದ ಕ್ಲಿನಿಕ್ಗೆ ಕರೆದೊಯ್ದು ಪರೀಕ್ಷಿಸಿದ ನಂತರ ಮೂಡಿಗೆರೆ ಆಸ್ಪತ್ರೆಗೆ ಕರೆತಂದು ಅಲ್ಲಿಂದ ಚಿಕ್ಕಮಗಳೂರು ಆಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ನಿಮ್ಹಾನ್ಸ್ ತಲುಪಿದ ತಕ್ಷಣ ಶಾಮಣ್ಣನವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಬಿಜೆಪಿ- ಜೆಡಿಎಸ್ ಪಾದಯಾತ್ರೆಯ ವಿರುದ್ಧ ಕಾಫಿನಾಡಲ್ಲಿ ಪ್ರತಿಭಟನೆ
ಚಿಕ್ಕಮಗಳೂರು: ನಗರದಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆ ವಿರುದ್ಧ ಅಹಿಂದ ಸಂಘಟನೆಗಳ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದರು. ತಾಲೂಕು ಕಛೇರಿಯಿಂದ ಆಜಾದ್ ಪಾರ್ಕ್ವರೆಗೆ ಮೆರವಣಿಗೆ ಹಾಗೂ ಪ್ರತಿಭಟನೆಯಲ್ಲಿ ಎಲ್ಲಾ ಅಹಿಂದ ನಾಯಕರು,ಕಾಂಗ್ರೇಸ್ ಶಾಸಕರು ,ನಾಯಕರು ಭಾಗಿಯಾದರು.
ಕೈ ನಾಯಕರಿಂದ ಬಿಜೆಪಿ – ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಆಗಸ್ಟ್ 9 ರಂದು ಮೈಸೂರಿನಲ್ಲಿ ಕಾಂಗ್ರೇಸ್ ನಡೆಸಲಿರುವ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಭಾಗವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಲಾಯಿತು.