ನರಸಿಂಹರಾಜಪುರ ರಸ್ತೆಯೋ..ಚರಂಡಿಯೋ..?!
– ಪವಿತ್ರ ಜೈನಕ್ಷೇತ್ರ ಬಸ್ತಿಮಠ ಜ್ವಾಲಾಮಾಲಿನಿ ದೇಗುಲದ ಎದುರು ಅವ್ಯವಸ್ಥೆ: ಸ್ಥಳೀಯ ಆಡಳಿತದ ನಿರ್ಲಕ್ಷ್ಯ: ಜನರ ಆಕ್ರೋಶ
ಶೃಂಗೇರಿ: ಅಪಾಯಕ್ಕೆ ದಾರಿ ಮಾಡಿಕೊಟ್ಟ ಹೈವೇ!
– ಇಬ್ಬರು ಸಾವನ್ನು ಕಂಡಿದ್ದ ಜಾಗದಲ್ಲೇ ಕಳಪೆ ಕಾಮಗಾರಿ?
NAMMUR EXPRESS NEWS
ಎನ್ ಆರ್ ಪುರ: ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಪಟ್ಟಣ ಪಂಚಾಯ್ತಿಯ 8ನೇ ವಾರ್ಡ್ನ ಸುಂಕದ ಕಟ್ಟೆ ಬಸ್ತಿಮಠ ಬಳಿ ಚರಂಡಿಯಲ್ಲಿ ಸರಾಗವಾಗಿ ಹೋಗಬೇಕಾದ ಮಳೆ ನೀರು ರಸ್ತೆಯಲ್ಲಿ ನಿಂತು ರಸ್ತೆಗೂ ಚರಂಡಿಗೂ ವ್ಯತ್ಯಾಸ ತಿಳಿಯದಂತಾಗಿದೆ. ಸುತ್ತಮುತ್ತಲು 3-4 ಶಾಲೆಗಳಿದ್ದು ಸಮೀಪದಲ್ಲೇ ಪವಿತ್ರ ಜೈನಕ್ಷೇತ್ರ ಬಸ್ತಿಮಠ ಜ್ವಾಲಾಮಾಲಿನಿ ಅಮ್ಮನವರ ದೇವಸ್ಥಾನ ಹಾಗೂ ಚರ್ಚ್ ಕೂಡ ಇದೆ. ದಿನ ನಿತ್ಯ ನೂರಾರು ಮಂದಿ ಸಂಚರಿಸೋ ಮುಖ್ಯ ರಸ್ತೆ ಇದಾಗಿದ್ದು ಬಸ್ ನಿಲ್ದಾಣವೂ ಪಕ್ಕದಲ್ಲಿರುವುದರಿಂದ ಪ್ರಯಾಣಿಕರು,ವಿದ್ಯಾರ್ಥಿಗಳು ಸಾರ್ವಜನಿಕರು ಇಲ್ಲೇ ಓಡಾಡಬೇಕಾಗಿದೆ. ಹೀಗಿರುವಾಗ ಇಂತಹ ಸುಸಜ್ಜಿತ ರಸ್ತೆಯ ಬದಿ ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದೆ ಕಣ್ಮುಚ್ಚಿ ಕುಳಿತ ಸಂಬಂಧಪಟ್ಟ ಇಲಾಖೆಯವರು ಆಗುವ ಅನಾಹುತಗಳಿಗೆ ದಾರಿ ಮಾಡಿ ಕೊಟ್ಟಿದ್ದಾರೆ. ಇನ್ನಾದರೂ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ವಾರ್ಡ್ನ ಸದಸ್ಯರು,ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತಕ್ಷಣ ಚರಂಡಿ ಸರಿಪಡಿಸಿ ರಸ್ತೆಯ ಮೇಲಿನ ನೀರು ಚರಂಡಿಯಲ್ಲಿ ಹೋಗುವಂತೆ ಮಾಡಿ ಸಾರ್ವಜನಿಕರಿಗೆ ನೆರವಾಗಿ ಆಗೋ ಅನಾಹುತ ತಪ್ಪಿಸಬೇಕಿದೆ.
ಅಪಾಯಕ್ಕೆ ದಾರಿ ಮಾಡಿಕೊಟ್ಟ ರಾಷ್ಟ್ರೀಯ ಹೆದ್ದಾರಿ!
ಶೃಂಗೇರಿ: ಶೃಂಗೇರಿಯಿಂದ ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಯಲ್ಲಿ ಬಿರುಕು ಕಾಣಿಸಿಕೊಂಡು ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ. ತಾಲೂಕಿನ ನೆಮ್ಮಾರು ಎಸ್ಟೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಈ ಬಿರುಕು ಕಾಣಿಸಿಕೊಂಡಿದ್ದು ಕಳಪೆ ಕಾಮಗಾರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಒಂದು ವರ್ಷದ ಹಿಂದೆ ಇದೇ ಜಾಗದಲ್ಲಿ ಕಾಮಗಾರಿ ಸಮಯದಲ್ಲಿ ಗುಡ್ಡ ಕುಸಿದು ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದರು. ತುಂಗಾ ನದಿ ತೀರದಲ್ಲಿ ಹಾದು ಹೋಗೋ ಈ ರಾಷ್ಟ್ರೀಯ ಹೆದ್ದಾರಿ ಆಯ ತಪ್ಪಿದರೆ ನದಿ ಪಾಲಾಗೋದಂತು ಗ್ಯಾರಂಟಿ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಈ ರಸ್ತೆ ಇನ್ನಷ್ಟು ಹದಗೆಟ್ಟಿದೆ.