ಮತ್ತೆ ನಕ್ಸಲ್ ಹೆಜ್ಜೆ!?
– ಬೈಂದೂರು: ಶಸ್ತ್ರ ಹಿಡಿದ ನಕ್ಸಲರ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರು
– ಕೇರಳ, ಕರ್ನಾಟಕ ಗಡಿಯಲ್ಲಿ ಎಚ್ಚರಿಕೆ
– ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೈ ಅಲರ್ಟ್
NAMMUR EXPRESS NEWS
ಚಿಕ್ಕಮಗಳೂರು/ಉಡುಪಿ: ಮತ್ತೆ ನಕ್ಸಲ್ ಹೆಜ್ಜೆ ರಾಜ್ಯದಲ್ಲಿ ಕಾಣುವ ಬಗ್ಗೆ ಪೊಲೀಸ್ ಇಲಾಖೆ ಸುಳಿವು ನೀಡಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕು ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಲವೆಡೆ ನಕ್ಸಲರ ಓಡಾಟದ ಸುಳಿವು ಸಿಕ್ಕಿದೆ. ಬೈಂದೂರು ತಾಲೂಕಿನ ಕೊಲ್ಲೂರು, ಮುದ್ದುರು, ಜಡ್ಕಲ್, ಬೆಳ್ಳಲ್ ಗ್ರಾಮಗಳ ಹಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಶಸ್ತ್ರ ಸಜ್ಜಿತ ನಕ್ಸಲರು ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ನಕ್ಸಲರು ಸಕ್ರಿಯ ಆಗಿದ್ದಾರೆ ಎನ್ನಲಾಗಿದೆ.
ಕೇರಳದಿಂದ ನಕ್ಸಲರು ಎಂಟ್ರಿ ಆದ್ರಾ?
ಕೇರಳದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಕಡಿವಾಣ ಬಿದ್ದ ಪರಿಣಾಮ ಅಲ್ಲಿನ ನಕ್ಸಲರು ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು ಯಾರೇ ಅಪರಿಚಿತರು ಗ್ರಾಮದಲ್ಲಿ ಓಡಾಟ ನಡೆಸಿದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಅಲರ್ಟ್ ನಕ್ಸಲ್ ನಾಯಕ ಸಾಕೇತ್ ರಾಜನ್ ಸತ್ತು ಫೆ.6ಕ್ಕೆ 19 ವರ್ಷ ಕಳೆದಿದೆ. ಹೀಗಾಗಿ ರೆಡ್ ಸಲ್ಯೂಟ್ ಎಂಬ ಕಾರ್ಯಕ್ರಮ ನಕ್ಸಲರಲ್ಲಿ ಆಚರಣೆಯಲ್ಲಿದೆ. ಈ ಉದ್ದೇಶದಿಂದ ಮಲೆನಾಡು ಮೂಲದ ವಿಕ್ರಂ ಗೌಡನ ತಂಡ ಕೊಲ್ಲೂರು ಸಮೀಪ ಬಂದಿರಬಹುದು ಎಂದು ಅಂದಾಜಿಸಲಾಗಿ ಎಂಬ ಮಾಹಿತಿ ಉನ್ನತ ಮೂಲದಿಂದ ದೊರಕಿದೆ.
ಮಲೆನಾಡು, ಕರಾವಳಿಯಲ್ಲಿ ಕೂಂಬಿಂಗ್ ಚುರುಕು
ಕರಾವಳಿ ಭಾಗದಲ್ಲಿ ನಕ್ಸಲರ ಓಡಾಟದ ಮಾಹಿತಿ ಬಂದ ಹಿನ್ನಲೆ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಚುರುಕುಕೊಳಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕ್ಯಾಂಪ್ ಗಳಿದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ 5 ದಿನಗಳ ಕಾಲ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸುವಂತೆ ನಕ್ಸಲ್ ನಿಗ್ರಹ ದಳದ ಎಸ್ಪಿ ಜಿತೇಂದ್ರ ಕುಮಾರ್ ದಯಮ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಶೃಂಗೇರಿ ಮೂಲದ ಬಿ ಜಿ ಕೃಷ್ಣಮೂರ್ತಿಯನ್ನು ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ಬಂಧಿಸಲಾಗಿದ್ದು ಆತನ ವಿಚಾರಣೆ ಶಿವಮೊಗ್ಗದಲ್ಲಿ ನಡೆಯುತ್ತಿರುವಾಗಲೇ ಈ ಸುದ್ದಿ ಹೊರ ಬಿದ್ದಿದೆ.