ಅಡಿಕೆ,ಕಾಫಿ ಬೆಳೆ ಹಾನಿ: ಮಳೆ ಹೀಗೆ ಬಂದ್ರೆ ಗೋವಿಂದ!
– ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಅವಾಂತರ
– ಶೃಂಗೇರಿ, ಬಾಳೆಹೊನ್ನೂರು ಭಾಗದಲ್ಲಿ ಅತೀ ಹೆಚ್ಚು ನಷ್ಟ
– ಎನ್ ಆರ್ ಪುರದಲ್ಲಿ 3 ಮನೆ ಕುಸಿತ: ಅಪಾರ ನಷ್ಟ
NAMMUR EXPRESS NEWS
ಚಿಕ್ಕಮಗಳೂರು: ಪುನರ್ವಸು ಆಯ್ತು ಈಗ ಪುಷ್ಯ ಸರದಿ ಜಿಲ್ಲೆಯಾದ್ಯಂತ ಭಾರೀ ಮಳೆ,ಗಾಳಿ ಧರೆಗುರುಳಿದ ಮರಗಳು,ಕುಸಿದ ಗುಡ್ಡ,ಮುರಿದ ವಿದ್ಯುತ್ ಕಂಬಗಳು,ಹತ್ತು ದಿನ ಕಳೆದರು ಬಾರದ ಕರೆಂಟ್. ಜನಜೀವನ ಸಂಪೂರ್ಣ ಅಸ್ಥವ್ಯಸ್ಥ. ಭಾರೀ ಗಾಳಿಗೆ ಅಡಿಕೆ, ಕಾಳುಮೆಣಸು ಉದುರುತ್ತಿದ್ದ ತಲೆಮೇಲೆ ಕೈಹೊತ್ತು ಕೂತ ರೈತ ಬಾಂಧವರು. ಹೌದು. ಇದು ಕಾಫಿ ನಾಡು ಚಿಕ್ಕಮಗಳೂರಿನ ಕಥೆ.
ಶೃಂಗೇರಿಯಲ್ಲಿ ಉಕ್ಕಿ ಹರಿಯುತ್ತಿರುವ ತುಂಗಾ ನದಿ!
ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ,ಗಾಳಿಗೆ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.ತುಂಗಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಉಂಟಾಗಿ ಅನೇಕ ಕಡೆಗಳಲ್ಲಿ ತೋಟ,ಗದ್ದೆಗಳಿಗೆ ನೀರು ನುಗ್ಗಿದೆ. ಶೃಂಗೇರಿ ಕುರಬಗೇರಿ ಶ್ರೀಮಠ ಸಂಪರ್ಕಿಸುವ ಪ್ಯಾರಲಲ್ ರೋಡ್ ಸಂಪೂರ್ಣ ಜಲಾವೃತಗೊಂಡಿದ್ದು ಎರಡು ದಿನಗಳಿಂದ ಸಂಚಾರ ಸ್ಥಗಿತಗೊಂಡಿದೆ. ತಾಲೂಕಿನ ಹಲವೆಡೆ ಭೂಕುಸಿತ,ಮರ ಬಿದ್ದ ಪ್ರಕರಣಗಳು ವರದಿಯಾಗಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಗಾಳಿಯ ರಭಸಕ್ಕೆ ರಸ್ತೆ ಬದಿಯ ಮರಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಬಹುತೇಕ ಮರಗಳು ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಬಿದ್ದು ತುಂಡಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಪದೇ ಪದೇ ಮರಗಳು ಬೀಳುತ್ತಿದ್ದು ಇವುಗಳನ್ನು ತೆರವುಗೊಳಿಸಲು ಮೆಸ್ಕಾಂ ಸಿಬ್ಬಂದಿ ಹಗಲಿರುಳು ಹರಸಾಹಸ ಪಡೆತ್ತಿದ್ದಾರೆ. ಇವರ ಈ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ ಆದರೆ ಅರಣ್ಯ ಇಲಾಖೆಯ ಮೇಲೆ ಈಗ ಜನರು ಕೋಪಗೊಂಡಿದ್ದಾರೆ ಇಷ್ಟೆಲ್ಲಾ ವಿದ್ಯತ್ ಸಮಸ್ಯೆಯಾಗಲು ಅರಣ್ಯ ಇಲಾಖೆಯೇ ನೇರ ಕಾರಣವೆಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.
ಎನ್ ಆರ್ ಪುರದಲ್ಲಿ ಮನೆ ಕುಸಿತ!
ಎನ್ ಆರ್ ಪುರ: ಭಾರೀ ಮಳೆಗೆ ಎನ್ ಆರ್ ಪುರ ಪಟ್ಟಣದ ವಾರ್ಡ್ ನಂ. 1ರಲ್ಲಿ ಮೂರು ಮನೆ ಕುಸಿತಗೊಂಡಿದೆ. ಘಟನಾ ಸ್ಥಳಕ್ಕೆ ಮಾನ್ಯ ನ್ಯಾಯಾಧೀಶರು,ಮಾನ್ಯ ತಹಸಿಲ್ದಾರರು, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು,ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜುಬೇದಾರವರರು ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಆದರೆ ಮನೆಗಳಿಗೆ ಹಾನಿಯಾಗಿದೆ.
ಬಾಳೆಹೊನ್ನೂರು ಬಳಿ ರಸ್ತೆ ಸಂಪರ್ಕ ಕಡಿತ!
ಬಾಳೆಹೊನ್ನೂರಿನ ಹಲವೆಡೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.ಮನೆಗಳಿಗೆ ಹಾನಿಯಾಗಿದೆ.ತೆಪ್ಪದಗಂಡಿ ಮಹಲ್ಗೋಡು ಸಮೀಪ ಭದ್ರಾ ನದಿ ನೀರು ರಸ್ತೆ ಮೇಲೆ ಬಂದಿದ್ದು ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.