ಕಾಫಿ ನಾಡಲ್ಲಿ ಮಳೆಗೆ ಕಂಗೆಟ್ಟ ಜನ!
– ಎಲ್ಲೆಡೆ ಮಳೆ, ಭೂಕುಸಿತ, ಪ್ರವಾಹ, ಜೀವನ ಕಷ್ಟ ಕಷ್ಟ
– ಅತೀ ಹೆಚ್ಚು ಮಳೆ: ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ
– ಹೊರನಾಡಿನ ಸಂಪರ್ಕ ಕಡಿತ: ಮತ್ತಷ್ಟು ಕಡೆ ಅಪಾಯ
– ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹ: ಜನರಿಗೆ ಭಯ!
ವಿಶೇಷ ವರದಿ: ಸಚಿನ್ ಶೃಂಗೇರಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಬ್ಬರಿಸುತ್ತಿರುವ ಪುಷ್ಯ. ಭಾರೀ ಮಳೆಗೆ ಮತ್ತೆ ಪ್ರವಾಹ,ಭೂಕುಸಿತ,ರಸ್ತೆ ಸಂಪರ್ಕ ಬಂದ್ ಎಲ್ಲೆಡೆ ಕೈಕೊಟ್ಟ ವಿದ್ಯುತ್ ಹಾಗೂ ನೆಟ್ವರ್ಕ್. ಎಲ್ಲಾ ಕಡೆ ಅಪಾಯದ ಭೀತಿ. ಕೊಚ್ಚಿಕೊಂಡು ಹೋಗುತ್ತಿರುವ ತೋಟಗಳು. ಮತ್ತೆ ಶಾಲೆ, ಕಾಲೇಜುಗಳಿಗೆ ರಜೆ. ಹೌದು. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 15 ಗಂಟೆಗಳಿಂದ ಒಂದೇ ಸಮನೆ ಬಿಡದೆ ಸುರಿಯುತ್ತಿದೆ.
ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ
ಭಾರಿ ಮಳೆಗೆ ಜಿಲ್ಲೆಯ ಪ್ರಮುಖ ನದಿಗಳು,ಹಳ್ಳ ಕೊಳ್ಳಗಳು ತುಂಬಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಹಲವಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವೆಡೆ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಷ್ಟಕರವಾಗಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹೊರನಾಡಿನ ಸಂಪರ್ಕ ಕಡಿತ: ಮತ್ತಷ್ಟು ಕಡೆ ಅಪಾಯ
ಕಳಸ – ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಹೊರನಾಡಿನ ಸಂಪರ್ಕ ಕಡಿತಗೊಂಡಿದೆ. ಬಾಳೆಹೊನ್ನೂರಿನಲ್ಲಿ ಭದ್ರಾ ನದಿ ಉಕ್ಕಿ ಹರಿಯುತ್ತಿದೆ ರಸ್ತೆ ಮೇಲೆ ನದಿ ನೀರು ಬಂದ ಪರಿಣಾಮ ಬಾಳೆಹೊನ್ನೂರು-ಕಳಸ ಸಂಪರ್ಕ ಸ್ಥಗಿತವಾಗಿದೆ.
ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹ: ಜನರಿಗೆ ಭಯ!
ಶೃಂಗೇರಿಯಲ್ಲಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು ಅಂಗಡಿ ಮಳಿಗೆಗಳಿಗೆ ನೀರುನುಗ್ಗಿದೆ. ಶೃಂಗೇರಿ ಶ್ರೀಮಠದ ಹಿಂಭಾಗದಿಂದ ವಿದ್ಯಾರಣ್ಯಪುರ ಸಂಪರ್ಕಿಸುವ ರಸ್ತೆಯ ಮೇಲೆ ನದಿ ನೀರು ಬಂದಿದ್ದು ಸಂಪರ್ಕ ಸ್ಥಗಿತಗೊಂಡಿದೆ. ಶೃಂಗೇರಿಯ ಕುರುಬಗೇರಿ ರಸ್ತೆ ಮೇಲೆ ತುಂಗಾ ನದಿ ನೀರು ಬಂದಿದ್ದು ಸಂಚಾರ ಸ್ಥಗಿತಗೊಂಡಿದೆ.
ಶೃಂಗೇರಿ- ಮಂಗಳೂರು ಸಂಪರ್ಕ ಭಾಗಶಃ ಸ್ಥಗಿತ?
ಶೃಂಗೇರಿಯಿಂದ ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ಮೇಲೆ ನೆಮ್ಮಾರಿನಲ್ಲಿ ತುಂಗಾ ನದಿ ನೀರು ಬಂದಿದ್ದು ಶೃಂಗೇರಿ- ಮಂಗಳೂರು ಸಂಪರ್ಕ ಭಾಗಶಃ ಸ್ಥಗಿತಗೊಂಡಿದೆ.ಹರಿಹರಪುರದಲ್ಲಿ ತುಂಗಾ ಪ್ರವಾಹಕ್ಕೆ ಕೃಷಿಭೂಮಿಗೆ ನೀರು ನುಗ್ಗಿದೆ. ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಮಳೆಯಿಂದ ಗೋಡೆ ಕುಸಿತ,ಭೂ ಕುಸಿತದಂತ ಘಟನೆಗಳು ವರದಿಯಾಗಿದೆ.
ಅಡಿಕೆ, ಕಾಫಿ ಬೆಳೆ ಉದುರುವ ಭೀತಿ
ಮಳೆ ಹೆಚ್ಚಾಗತೊಡಗಿದೆ. ತೋಟಗಳಲ್ಲಿ ಮೊದಲೇ ಫಸಲು ಇಲ್ಲದೆ ಕಾಫಿ ನಾಡ ಕೊಪ್ಪ, ಶೃಂಗೇರಿ, ಮೂಡಗೆರೆ ರೈತರು ಕಂಗಾಲಾಗಿದ್ದಾರೆ. ಇದೀಗ ಕೊಳೆ ಭೀತಿ ಶುರುವಾಗಿದೆ. ಕಾಫಿಗೂ ಆತಂಕ ಎದುರಾಗಿದೆ.