ನಿಲ್ಲದ ಕಾಡು ಪ್ರಾಣಿಗಳ ಹಾವಳಿ..!!
– ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ
– ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ ನಡೆದ ಘಟನೆ
NAMMUR EXPRESS NEWS
ಎನ್ ಆರ್ ಪುರ: ತಾಲೂಕಿನ ಮುತ್ತಿನ ಕೊಪ್ಪ ಸಮೀಪದ ತೋಟದ ಕೆರೆ ಎಂಬಲ್ಲಿ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಶನಿವಾರ ರಾತ್ರಿ 7:30 ರ ಸುಮಾರಿಗೆ ಘಟನೆ ನಡೆದಿದ್ದು ಘಟನೆಯಲ್ಲಿ ಶಶಿಧರ್ ಎಂಬವರು ಗಾಯಗೊಂಡಿದ್ದಾರೆ, ಗಾಯಾಳವನ್ನು ಸ್ಥಳೀಯ ಗ್ರಾಮಸ್ಥರು ಉಪಚರಿಸಿ, ಆ ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೆಲಸಕ್ಕೆಂದು ಬೇರೆ ಊರಿಗೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೋಟದ ಕೆರೆ ಸಮೀಪ ಶಶಿಧರ್ ರವರಿಗೆ ಅಡ್ಡಲಾಗಿ ಬಂದು ಹುಲಿಯೊಂದು ಬೈಕ್ ಮೇಲೆ ಹಾರಿದ ಅನುಭವ ಆಗಿದೆ. ಮಿಂಚಿನಂತೆ ನಡೆದ ಘಟನೆಯಲ್ಲಿ ಬೈಕ್ನಿಂದ ಶಶಿಧರ್ ಕೆಳಕ್ಕೆ ಬಿದ್ದಿದ್ದಾರೆ. ಇದೇ ವೇಳೆ ಅಲ್ಲಿಗೆ ಅಯ್ಯಪ್ಪಸ್ವಾಮಿ ಭಕ್ತರಿದ್ದ ಟಿ ಟಿ ಯೊಂದು ಬಂದಿದ್ದು, ಹೀಗಾಗಿ ಅದರ ಬೆಳಕಿಗೆ ವನ್ಯಜೀವಿ ಕಾಡಿನತ್ತ ಓಡಿದೆ ಎನ್ನಲಾಗಿದೆ.
ಗಾಯಾಳು ಶಶಿಧರ್ ಹೇಳಿದ್ದೇನು..??
ಕಾಡಿನ ದಾರಿಯಲ್ಲಿ ಹೋಗುತ್ತಿದ್ದವೇಳೆ ತುಸು ಭಯವಿರುತ್ತೆ. ಹಾಗಾಗಿ ಸ್ವಲ್ಪ ಸ್ಪೀಡಾಗಿ ಬೈಕ್ನಲ್ಲಿ ಹೋಗುತ್ತಿದ್ದೆ. ಈ ವೇಳೆ ಅಲ್ಲಿಯೇ ರಸ್ತೆ ಪಕ್ಕದಲ್ಲಿನ ಟ್ರಂಚ್ವೊಂದರ ಬಳಿ ಹುಲಿಯ ರೀತಿಯ ಪ್ರಾಣಿಯೊಂದು ಕಾಣಿಸಿತು ಆದರೆ ವೇಗವಾಗಿದ್ದರಿಂದ ಅದರ ಬಗ್ಗೆ ಗಮನಕೊಡಲಿಲ್ಲ. ಅಷ್ಟೊತ್ತಿಗಾಗಲೇ ಧೀಢೀರ್ನೆ ಹಾರಿದ ಪ್ರಾಣಿ ಸೀದಾ ನನ್ನ ಬೈಕ್ನ ಬಂಪರ್ ಮೇಲೆ ಬಿದ್ದಿದೆ. ನಾನು ಆಯತಪ್ಪಿ ಅಲ್ಲಿಯೇ ಬಿದ್ದೆ. ಅಲ್ಲದೇ ಭಯದಿಂದ ಮೇಲಕ್ಕೆ ಏಳಲು ಸಹ ಸಾಧ್ಯವಾಗಲಿಲ್ಲ, ಮೇಲಾಗಿ ವನ್ಯಜೀವಿ ಮತ್ತೆ ದಾಳಿ ಮಾಡುವ ಆತಂಕ ಇತ್ತು. ಅಷ್ಟೊತ್ತಿಗೆ ಅಲ್ಲಿಗೆ ಟಿ ಟಿ ಯೊಂದು ಬಂದಿದೆ. ಅದರ ಬೆಳಕಿಗೆ ಪ್ರಾಣಿ ಕಾಡಿನತ್ತ ಓಡಿದಂತೆ ಕಾಣಿತು. ಆನಂತರ ಮುತ್ತಿನಕೊಪ್ಪದ ಯುವಕನೊಬ್ಬ ನನ್ನ ಸ್ಥಿತಿ ಕಂಡು ನೀರು ಕೊಟ್ಟು ಉಪಚರಿಸಿದ್ದಾರೆ. ಆನಂತರ ಅಲ್ಲಿಯೇ ಹತ್ತಿರ ಇರುವ ಹಳ್ಳಿಗೆ ಕರೆದುಕೊಂಡು ಹೋಗಿದ್ದಾರೆ, ಅಲ್ಲಿನ ಜನರು ತಮ್ಮನ್ನು ಉಪಚರಿಸಿದ್ದು, ಈ ವೇಳೆ ಅಲ್ಲಿನ ಹಳ್ಳಿಯ ಜನರ ಪೈಕಿ ಈ ಭಾಗದ ಕೆರೆಯೊಂದರ ಬಳಿ ಹುಲಿಯಿದ್ದು, ಅದರ ಘರ್ಜನೆ ಕೇಳಿದ್ದಾಗಿ ಹೇಳಿದರು. ಆದರೆ ಮತ್ತೆ ಕೆಲವರು ತಮ್ಮ ಮೇಲೆ ದಾಳಿ ನಡೆಸಿದ್ದು ಹುಲಿಯಲ್ಲ ಚಿರತೆ ಎಂದು ಹೇಳಿದ್ದಾರೆ. ಆದರೆ ನನ್ನ ಕಣ್ಣಿಗೆ ದಾಳಿ ಮಾಡಿದ ಪ್ರಾಣಿ ಹುಲಿಯಂತೆ ಕಂಡಿದೆ. ಗಾಬರಿಯಲ್ಲಿ ಪೂರ್ಣ ರೀತಿಯಲ್ಲಿ ಜಡ್ಜ್ ಮಾಡಲು ಸಾಧ್ಯವಾಗಲಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿರುವ ಶಶಿಧರ್ ಹೇಳಿದ್ದಾರೆ.